ಯುದ್ಧ ಬೇಡ ಎನ್ನುವ ಸಿಎಂ ಹೇಳಿಕೆಯನ್ನು ಅಪಾರ್ಥ ಮಾಡದಿರಿ; ಸಚಿವ ಪರಮೇಶ್ವರ್
x

ಗೃಹ ಸಚಿವ ಡಾ. ಜಿ. ಪರಮೇಶ್ವರ್

ಯುದ್ಧ ಬೇಡ ಎನ್ನುವ ಸಿಎಂ ಹೇಳಿಕೆಯನ್ನು ಅಪಾರ್ಥ ಮಾಡದಿರಿ; ಸಚಿವ ಪರಮೇಶ್ವರ್

ಭಾರತ ಹಿಂದಿನಿಂದಲೂ ಶಾಂತಿಯನ್ನು ನಂಬಿಕೊಂಡು ಬಂದಿರುವ ರಾಷ್ಟ್ರ, ನಾವಾಗಿಯೇ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಆದರೆ ನಮ್ಮನ್ನು ಕೆಣಕಿದಾಗ ಸೂಕ್ತ ಉತ್ತರ ಕೊಟ್ಟಿದ್ದೇವೆ ಎಂದರು.


ಶಾಂತಿ ದೃಷ್ಟಿಯಿಂದ ಪಾಕಿಸ್ತಾನದೊಂದಿಗೆ ಯುದ್ದ ಬೇಡವೆಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆಯನ್ನು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಪಹಲ್ಗಾಮ್​ ಭಯೋತ್ಪಾದನಾ ಚಟುವಟಿಕೆಗೆ ಪ್ರತಿಯಾಗಿ ''ಪಾಕಿಸ್ತಾನದ ಜತೆ ಯುದ್ಧ ಬೇಡ'' ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿವಾದಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸಚಿವರು ಈ ರೀತಿ ಹೇಳಿದರು.

ಭಾರತ ಹಿಂದಿನಿಂದಲೂ ಶಾಂತಿಯನ್ನು ನಂಬಿಕೊಂಡು ಬಂದಿರುವ ರಾಷ್ಟ್ರ. ನಾವಾಗಿಯೇ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಆದರೆ ನಮ್ಮನ್ನು ಕೆಣಕಿದಾಗ ಸೂಕ್ತ ಉತ್ತರ ಕೊಡಬೇಕಾಗಿದೆ ಎಂದು ಹೇಳಿದರು.

''ಕೇಂದ್ರ ಸರ್ಕಾರವು ಪಾಕಿಸ್ತಾನ ಮೂಲದ ಪ್ರಜೆಗಳನ್ನು ದೇಶದಿಂದ ಹೊರಹಾಕುವಂತೆ ಆದೇಶಿಸಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ರಾಜ್ಯದಲ್ಲಿ ಎಷ್ಟು ಮಂದಿ ಪಾಕಿಸ್ತಾನದ ಪ್ರಜೆಗಳು ಇದ್ದಾರೆ ಎಂಬ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತಿದ್ದು, ಅವರನ್ನು ಶೀಘ್ರವೇ ವಾಪಸ್‌ ಕಳಿಸಲಾಗುತ್ತದೆ. ದೀರ್ಘಾವಧಿ ವೀಸಾ ಪಡೆದಿರುವವರು ಹಾಗೂ ಮದುವೆ ಆಗಿರುವವರಿಗೆ ಕೇಂದ್ರವೇ ಕೆಲವು ರಿಯಾಯಿತಿ ನೀಡಿದ್ದು ಅವರನ್ನು ಹೊರತುಪಡಿಸಿ ಉಳಿದ ಪಾಕ್‌ ಪ್ರಜೆಗಳನ್ನು ವಾಪಸ್‌ ಕಳಿಸಲಾಗುತ್ತದೆ,'' ಎಂದರು.

ಸಿಎಂ ವಿವಾದ ಏನು?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ʼಪಾಕಿಸ್ತಾನದೊಂದಿಗೆ ಯುದ್ಧ ಬೇಡʼ ಎಂಬ ಹೇಳಿಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಪಾಕಿಸ್ತಾನದ ಮಾಧ್ಯಮಗಳೂ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಬಹಳಷ್ಟು ಚರ್ಚೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಸಿದ್ದರಾಮಯ್ಯರ ಹೇಳಿಕೆಯನ್ನು ಟೀಕಿಸಿದ್ದವು.

ʼಪಾಕಿಸ್ತಾನ ರತ್ನ ಸಿದ್ದರಾಮಯ್ಯʼ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದರು. ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ʼಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್‌ʼ ಎಂದು ಏಕವಚನದಲ್ಲೇ ಟೀಕೆ ಮಾಡಿದ್ದರು.

ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿಲ್ಲ, ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ಧ, ಯುದ್ಧ ಅಂತಿಮ ಆಯ್ಕೆಯೇ ಹೊರತು ಏಕೈಕ ಆಯ್ಕೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Read More
Next Story