ಖರ್ಗೆ ಅಂಗಳಕ್ಕೆ ಸಿಎಂ-ಡಿಸಿಎಂ ಜಟಾಪಟಿ: ಸದಾಶಿವನಗರದಲ್ಲಿಂದು  ಸಂಧಾನ?
x

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌

ಖರ್ಗೆ ಅಂಗಳಕ್ಕೆ ಸಿಎಂ-ಡಿಸಿಎಂ ಜಟಾಪಟಿ: ಸದಾಶಿವನಗರದಲ್ಲಿಂದು ಸಂಧಾನ?

ಸಿಎಂ ಸಿದ್ದರಾಮಯ್ಯ ಅವರ ಭೇಟಿಯ ಬೆನ್ನಲ್ಲೇ ಅಥವಾ ನಂತರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಖರ್ಗೆಯವರನ್ನು ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಎಂ ಅವರ ವಾದಕ್ಕೆ ಪ್ರತಿಯಾಗಿ ತಮ್ಮ ಅಹವಾಲು ಮಂಡಿಸಲು ಡಿಕೆಶಿ ಸಜ್ಜಾಗಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಂಗಳ ತಲುಪಿದೆ. ತಂತ್ರ-ಪ್ರತಿತಂತ್ರಗಳ ನಡುವೆಯೇ ಇಂದು (ಶನಿವಾರ) ಸಂಜೆ ಉಭಯ ನಾಯಕರು ಖರ್ಗೆಯವರನ್ನು ಭೇಟಿಯಾಗುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಇಂದು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಲಿದೆ. ಸಂಜೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖರ್ಗೆಯವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ನಾಯಕತ್ವ ಗೊಂದಲ ಮತ್ತು ಸಂಪುಟ ಪುನಾರಚನೆಯ ವಿಚಾರಗಳು ಈ ಸಭೆಯ ಪ್ರಮುಖ ಅಜೆಂಡಾ ಆಗಿರಲಿವೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಪರೇಡ್ ಬಗ್ಗೆ ಸಿಎಂ ದೂರು?

ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರು ಮತ್ತು ಸಚಿವರು ದೆಹಲಿಗೆ ತೆರಳಿ ಲಾಬಿ ನಡೆಸಿದ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. "ಪದೇ ಪದೇ ಶಾಸಕರು ಗುಂಪುಗೂಡಿ ದೆಹಲಿಗೆ ಹೋಗುವುದರಿಂದ ಸರ್ಕಾರಕ್ಕೆ ಮುಜುಗರವಾಗುತ್ತಿದೆ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ," ಎಂದು ಖರ್ಗೆ ಬಳಿ ಸಿಎಂ ಪ್ರಸ್ತಾಪಿಸುವ ಸಾಧ್ಯತೆಯಿದೆ. ಅಲ್ಲದೆ, ಪಕ್ಷದಲ್ಲಿ ಶಿಸ್ತು ಕಾಪಾಡುವಂತೆ ಹೈಕಮಾಂಡ್ ಮೂಲಕ ಸಂದೇಶ ರವಾನಿಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

ಸಿಎಂ ಹಿಂದೆಯೇ ಡಿಕೆಶಿ ಎಂಟ್ರಿ ಸಾಧ್ಯತೆ

ಸಿಎಂ ಸಿದ್ದರಾಮಯ್ಯ ಅವರ ಭೇಟಿಯ ಬೆನ್ನಲ್ಲೇ ಅಥವಾ ನಂತರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಖರ್ಗೆಯವರನ್ನು ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಎಂ ಅವರ ವಾದಕ್ಕೆ ಪ್ರತಿಯಾಗಿ ತಮ್ಮ ಅಹವಾಲು ಮಂಡಿಸಲು ಡಿಕೆಶಿ ಸಜ್ಜಾಗಿದ್ದಾರೆ. 'ಅಧಿಕಾರ ಹಂಚಿಕೆ ಒಪ್ಪಂದ' ಮತ್ತು 2.5 ವರ್ಷಗಳ ಅವಧಿಯ ಬಗ್ಗೆ ಚರ್ಚಿಸಲು ಡಿಕೆಶಿ ಈ ಭೇಟಿಯನ್ನು ಬಳಸಿಕೊಳ್ಳಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

'ಐದು ವರ್ಷ' ವರ್ಸಸ್ 'ಆಲ್ ದಿ ಬೆಸ್ಟ್'

ನಿನ್ನೆಯಷ್ಟೇ (ಶುಕ್ರವಾರ) ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಿದೆ. "ಯಾರೇ ಏನೇ ಹೇಳಲಿ, ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ. ಅಷ್ಟೇ ಅಲ್ಲ, ಮುಂದಿನ ಎರಡು ಬಜೆಟ್‌ಗಳನ್ನೂ ನಾನೇ ಮಂಡಿಸುತ್ತೇನೆ," ಎಂದು ಸಿಎಂ ವಿಶ್ವಾಸದಿಂದ ಗುಡುಗಿದ್ದರು.

ಸಿಎಂ ಅವರ ಈ ಖಡಕ್ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ನಯವಾಗಿಯೇ ಕೌಂಟರ್ ಕೊಟ್ಟಿದ್ದಾರೆ. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, "ಐ ವಿಶ್ ಹಿಮ್ ಆಲ್ ದಿ ಬೆಸ್ಟ್ (ಅವರಿಗೆ ಒಳ್ಳೆಯದಾಗಲಿ)," ಎಂದು ಹೇಳುವ ಮೂಲಕ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಈ ಒಂದೇ ಸಾಲಿನ ಹೇಳಿಕೆಯು ಡಿಕೆಶಿ ಅವರ ಅಸಮಾಧಾನ ಮತ್ತು ಮುಂದಿನ ಹೋರಾಟದ ಮುನ್ಸೂಚನೆಯನ್ನು ನೀಡಿದೆ.

Read More
Next Story