ASHA Workers Protest | ಆಶಾ ಕಾರ್ಯಕರ್ತೆಯರ ಗೌರವಧನ 10 ಸಾವಿರ; ಸರ್ಕಾರ ಒಪ್ಪಿಗೆ
ಸಂಘಟನೆಯ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲು ಮುಖಂಡರು ಒಪ್ಪಿಗೆ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಸಿಕ10 ಸಾವಿರ ರೂ. ಗೌರವಧನವನ್ನು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.
ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 5000 ರೂ ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪೋರ್ಟಲ್ ಸುಧಾರಣೆಗೆ ಸೂಚನೆ
ಮಾಹಿತಿಯನ್ನು ಪೋರ್ಟಲ್ ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಗೌರವಧನ ನಿಲ್ಲಿಸದೆ ರಜೆ
ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು.
ಸರ್ಕಾರ ನಿಮ್ಮೊಂದಿಗಿದೆ:ಸಿಎಂ
ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಹೋರಾಟ ಮಾಡುವುದು ಸಂವಿಧಾನ ಬದ್ಧ ಹಕ್ಕು.ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಧರಣಿ ವಾಪಸ್
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಸಿಎಂ ಸಂಧಾನದ ನಂತರ ಹಿಂಪಡೆಯಲಾಗಿದೆ.
ಸಂಘಟನೆಯ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲು ಮುಖಂಡರು ಒಪ್ಪಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಗೌರವ ಧನವನ್ನು 8 ರಿಂದ 10 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆದರು.
ಇದಕ್ಕೂ ಮುನ್ನ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಸಂಘಟನೆ ಮುಖಂಡರ ಜೊತೆ ಸಂಧಾನಕ್ಕೆ ಬಂದಿದ್ದರು. ಆದರೆ, ಸಂಧಾನ ವಿಫಲವಾಗಿತ್ತು.
ಆಶಾ ಕಾರ್ಯಕರ್ತೆಯರು ಸಿಎಂ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವವರೆಗೂ ಧರಣಿ ಕೈಬಿಡುವುದಿಲ್ಲ. ಇಲ್ಲಿಯೇ ಸಂಕ್ರಾಂತಿ ಹಬ್ಬ ಆಚರಿಸುವುದಾಗಿ ಪಟ್ಟು ಹಿಡಿದಿದ್ದರು. ಆ ಬಳಿಕ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದ್ದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಂಘಟನೆ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು. ಸಂಘಟನೆ ಮುಂದಿಟ್ಟಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಬಳಿಕ ಧರಣಿ ಮುಕ್ತಾಯ ಮಾಡಲು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.