
ನಬಾರ್ಡ್ ಅನುದಾನದಲ್ಲಿ 2,185 ಕೋಟಿ ರೂ. ಕಡಿತ: ಕೇಂದ್ರದ ಬಗ್ಗೆ ಸಿಎಂ ಅಸಮಾಧಾನ
ನಬಾರ್ಡ್‌ನಿಂದ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ, ಬಡ್ಡಿ ಸಹಾಯಧನಕ್ಕಾಗಿ 5,600 ಕೋಟಿ ರೂ. ನಿರೀಕ್ಷಿಸಿತ್ತು. ಆದರೆ, ನಬಾರ್ಡ್ ಕೇವಲ 3,415 ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ಆಧಾರಸ್ತಂಭವಾಗಿರುವ ನಬಾರ್ಡ್ ಅನುದಾನದಲ್ಲಿ ಕೇಂದ್ರ ಸರ್ಕಾರವು ಭಾರೀ ಕಡಿತ ಮಾಡಿದೆ. 2024-25ನೇ ಸಾಲಿನಲ್ಲಿ ನಿರೀಕ್ಷಿತ ಅನುದಾನಕ್ಕಿಂತ ಬರೋಬ್ಬರಿ 2,185 ಕೋಟಿ ರೂಪಾಯಿಗಳಷ್ಟು ಕಡಿಮೆ ಹಣ ಬಿಡುಗಡೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ, ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ರಾಜ್ಯ ಸರ್ಕಾರವು 2024-25ನೇ ಸಾಲಿಗೆ ನಬಾರ್ಡ್‌ನಿಂದ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಮತ್ತು ಬಡ್ಡಿ ಸಹಾಯಧನಕ್ಕಾಗಿ 5,600 ಕೋಟಿ ರೂಪಾಯಿಗಳ ಅನುದಾನವನ್ನು ನಿರೀಕ್ಷಿಸಿತ್ತು. ಆದರೆ, ನಬಾರ್ಡ್ ಕೇವಲ 3,415 ಕೋಟಿ ರೂಪಾಯಿಗಳನ್ನು ಮಾತ್ರ ಮಂಜೂರು ಮಾಡಿದೆ. ಇದರಿಂದಾಗಿ ನಿರೀಕ್ಷೆಗೂ ಮತ್ತು ವಾಸ್ತವಕ್ಕೂ 2,185 ಕೋಟಿ ರೂಪಾಯಿಗಳ ಬೃಹತ್ ಅಂತರ ಉಂಟಾಗಿದೆ. ಈ ಕಡಿತವು ರಾಜ್ಯದಾದ್ಯಂತ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡುವುದಕ್ಕೆ ನೇರ ಪೆಟ್ಟು ನೀಡಿದೆ ಎಂದು ತಿಳಿಸಿದ್ದಾರೆ.
ಕುಣಿಗಲ್ ಕ್ಷೇತ್ರಕ್ಕೆ ಆದ್ಯತೆ ಮತ್ತು ತಾರತಮ್ಯ ನಿವಾರಣೆ
ಚರ್ಚೆಯ ಸಂದರ್ಭದಲ್ಲಿ ಶಾಸಕ ರಂಗನಾಥ್ ಅವರು, ತಮ್ಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿದ್ದರೂ (ಕುಣಿಗಲ್‌ನಲ್ಲಿ ಶೇ.8 ಮತ್ತು ಮಧುಗಿರಿಯಲ್ಲಿ ಶೇ.26), ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಸರ್ಕಾರದ ಗಮನ ಸೆಳೆದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಪ್ರಸ್ತುತ ಸಾಲಿನಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸಿ, ಮುಂಬರುವ ವರ್ಷದಲ್ಲಿ ಕುಣಿಗಲ್ ಕ್ಷೇತ್ರಕ್ಕೆ ನಬಾರ್ಡ್ ಅನುದಾನ ಹಂಚಿಕೆಯಲ್ಲಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಗಣಕೀಕರಣ ಯೋಜನೆ ಜಾರಿಯಲ್ಲಿದೆ. ಕುಣಿಗಲ್ ತಾಲ್ಲೂಕಿನ ಸಂಘಗಳಿಗೆ ತಲಾ 1.30 ಲಕ್ಷ ರೂ.ಗಳಂತೆ ಒಟ್ಟು 24.70 ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಪ್ರತಿ ಸಂಘಕ್ಕೆ ಕಂಪ್ಯೂಟರ್, ಸ್ಕ್ಯಾನರ್, ಬಯೋಮೆಟ್ರಿಕ್ ಸ್ಕ್ಯಾನರ್, ಯುಪಿಎಸ್ ಮತ್ತು ನೆಟ್‌ವರ್ಕಿಂಗ್ ಉಪಕರಣಗಳನ್ನು ಒದಗಿಸಿ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯಾಪ್ತಿಯ ಕುಣಿಗಲ್ ತಾಲ್ಲೂಕಿನ ಸಾಲ ವಿತರಣೆಯ ವರದಿಯನ್ನು ಮುಖ್ಯಮಂತ್ರಿಗಳು ಮಂಡಿಸಿದರು. 2024-25ನೇ ಸಾಲು: 14,850 ರೈತರಿಗೆ 40.33 ಕೋಟಿ ರೂ. ಅಲ್ಪಾವಧಿ ಸಾಲ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ 10,833 ರೈತರಿಗೆ 38.40 ಕೋಟಿ ರೂ. ವಿತರಿಸಲಾಗಿದೆ. ಇದೇ ವೇಳೆ, 11 ರೈತರಿಗೆ 1.58 ಕೋಟಿ ರೂ.ಗಳ ಸಾಲ ನೀಡಲಾಗಿದೆ. 13,750 ರೈತರಿಗೆ 40 ಕೋಟಿ ರೂ. ಅಲ್ಪಾವಧಿ ಸಾಲದ ಗುರಿ ನಿಗದಿಪಡಿಸಿದ್ದು, ನವೆಂಬರ್ ಅಂತ್ಯದವರೆಗೆ 2,983 ರೈತರು 10.50 ಕೋಟಿ ರೂ. ಸಾಲ ಪಡೆದಿದ್ದಾರೆ. ಮಧ್ಯಮಾವಧಿ, ದೀರ್ಘಾವಧಿ ವಿಭಾಗದಲ್ಲಿ 20 ರೈತರಿಗೆ 2 ಕೋಟಿ ರೂ. ಗುರಿ ಇದ್ದು, ಈಗಾಗಲೇ 13 ರೈತರಿಗೆ 1.30 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

