
ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಜು.6 ರ ಶನಿವಾರ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಅವರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಪಕ್ಷದ ಅಧಿಕೃತ ಹೇಳಿಕೆಯಲ್ಲಿ ಈ ಮೊದಲು ಹೇಳಲಾಗಿತ್ತು. ಆದರೆ ಸದ್ಯ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ಅನಿವಾರ್ಯ ಕಾರಣಗಳಿಂದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಹೊಸ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಜುಲೈ 6 ರಂದು ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಈ ವೇಳೆ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಲಿಸಲಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಯಸುವವರು ಮೊಬೈಲ್ ಸಂಖ್ಯೆ 7899116899 ಅನ್ನು ಸಂಪರ್ಕಿಸಿ, ತಮ್ಮ ಹೆಸರು, ಪಕ್ಷದಲ್ಲಿನ ಹುದ್ದೆ ವಿವರಗಳ ಸಮೇತ ನೋಂದಾಯಿಸಿಕೊಳ್ಳಬೇಕು. ಇದು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಸೀಮಿತವಾಗಿ ಏರ್ಪಡಿಸಿರುವ ಭೇಟಿಯಾಗಿದೆ. ಶಾಸಕರು ಸೇರಿದಂತೆ ಬೇರೆ ಯಾರೂ ಆಗಮಿಸುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.