
ಬೆಳಗಾವಿಯಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.
ʼನಾಯಕತ್ವ ಬದಲಾವಣೆʼ ಚರ್ಚೆಗೆ ಬೇಸರ ; ಬಹಿರಂಗ ಹೇಳಿಕೆ ನೀಡದಂತೆ ಸಿಎಂ ವಾರ್ನಿಂಗ್
ಉತ್ತರ ಕರ್ನಾಟಕದ ಸಮಸ್ಯೆಗಳು ಬಂದಾಗ ಕೇಂದ್ರ ಮೌನ ವಹಿಸಿದೆ. ಈ ಭಾಗಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಈ ಸತ್ಯವನ್ನ ನಾವು ಜನರಿಗೆ ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಕಿವಿಮಾತು ಹೇಳಿದರು.
ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿ ನಾಯಕತ್ವ ಬದಲಾವನೆ ಕುರಿತ ಗೊಂದಲಕ್ಕೆ ತೆರೆ ಎಳೆದಿದ್ದರೂ ಪಕ್ಷದ ಕೆಲ ಶಾಸಕರ ಅನಗತ್ಯ ಹೇಳಿಕೆಗಳು ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿತ ಶಾಸಕರು ಮತ್ತೆ ನಾಯಕತ್ವ ಬದಲಾವಣೆ ಕುರಿತು ಮಾತನಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದ್ದಾರೆ. ಪಕ್ಷದ ಶಾಸಕರು ಹಾಗೂ ಮುಖಂಡರ ಹೇಳಿಕೆಗೆ ಶಾಸಕಾಂಗ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಯಾರೂ ಕೂಡ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ನಾನು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಹೇಳಿಕೆಗೆ ಬದ್ಧರಾಗಿದ್ದೇವೆ. ಶಾಸಕರು ಅನಗತ್ಯ ಹೇಳಿಕೆ ನೀಡಬಾರದು. ಸಭೆಯಲ್ಲಿ ನಿಮ್ಮ ಕ್ಷೇತ್ರಗಳ ಸಮಸ್ಯೆಗಳು, ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸೂಚಿಸಿದ್ದಾರೆ.
ಸದನದಲ್ಲಿ ಕೇಂದ್ರದ ವೈಫಲ್ಯ ಪ್ರಸ್ತಾಪಿಸಿ
ಅಧಿವೇಶನದ ಉಭಯ ಸದನಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎತ್ತಿ ತೋರಿಸಬೇಕು. ಕೃಷಿ, ನೀರಾವರಿ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ತೋರುತ್ತಿದೆ. ಉತ್ತರ ಕರ್ನಾಟಕ ಸಮಸ್ಯೆಗಳು ಬಂದಾಗ ಕೇಂದ್ರ ಮೌನವಹಿಸಿದೆ. ಈ ಭಾಗಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಈ ಸತ್ಯವನ್ನ ನಾವು ಜನರಿಗೆ ತಿಳಿಸಬೇಕು ಎಂದು ಶಾಸಕರಿಗೆ ಕಿವಿಮಾತು ಹೇಳಿದರು.
ಗ್ಯಾರಂಟಿ ಬಗ್ಗೆ ಅಪಸ್ವರ ಬೇಡ
ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕರು ಅಪಸ್ವರ ಮಾಡಬಾರದು. ಸರ್ಕಾರದಲ್ಲಿ ಹಣವಿಲ್ಲ ಎಂಬ ಹೇಳಿಕೆಗಳನ್ನು ಕೊಡಬಾರದು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಮ್ಮ ಎಲ್ಲಾ ಶಾಸಕರು ಹೆಚ್ಚಾಗಿ ಮಾತನಾಡಬೇಕು ಎಂದು ತಿಳಿಸಿದರು.
ಸಭೆಗೆ ಶಾಸಕ ಎಂ. ಕೃಷ್ಣಪ್ಪ ಗೈರು
ಪಕ್ಷದ ಶಾಸಕಾಂಗ ಸಭೆಗೆ ಎಲ್ಲಾ ಶಾಸಕರು ಹಾಜರಾಗುವುದು ಕಡ್ಡಾಯ. ಆದರೆ ಸಭೆ ನಡೆಯುತ್ತಿದ್ದ ಹಾಲ್ ಪಕ್ಕದಲ್ಲೇ ಇದ್ದರೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಹೊಟೇಲ್‌ಗೆ ಆಗಮಿಸಿ ಉಪಹಾರ ಸೇವಿಸಿ ವಾಪಸ್ ಆಗಿದ್ದಾರೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಹೆಚ್ಚಿನ ಅನುದಾನಕ್ಕೆ ಶಾಸಕರ ಬೇಡಿಕೆ
ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಘೋಷಿಸಿರುವ 50 ಕೋಟಿ ರೂ. ಜೊತೆಗೆ ಇನ್ನೂ ಹೆಚ್ಚಿನ ಅನುದಾನ ಕೊಡಬೇಕು. ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸಮರೋಪಾದಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ವಿಧಾನ ಸಭಾ ಕ್ಷೇತ್ರಗಳಲ್ಲಿ ನಾವು ಕೊಟ್ಟ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ಈ ಬಗ್ಗೆ ನೀವು ಗಮನಹರಿಸಬೇಕೆಂದು ಶಾಸಕರು ಒತ್ತಾಯಿಸಿದರು.
ಗ್ಯಾರಂಟಿ ಯೋಜನೆಗೆ ವಿರೋಧವಿಲ್ಲ: ಸಚಿವರಿಂದ ಸ್ಪಷ್ಟನೆ
ಶಾಸಕಾಂಗ ಸಭೆಯಲ್ಲಿ ಗ್ಯಾರಂಟಿ ಯೋಜನೆಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಅನಾವಶ್ಯಕವಾಗಿ ಯಾರಿಗೂ ನೀಡಬಾರದು ಎಂಬ ಬಗ್ಗೆ ಚರ್ಚೆ ನಡೆದಿದೆ. ನಾವು ಜನರಿಗೆ ಗ್ಯಾರಂಟಿಯ ಅನುಕೂಲದ ಬಗ್ಗೆ ತಿಳಿಸದಿದ್ದರೆ ಅದರಿಂದ ಪ್ರಯೋಜನವಾಗುವುದಿಲ್ಲ. ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ ಗ್ಯಾರಂಟಿ ಬಗ್ಗೆ ಮಾತನಾಡಬೇಕೆಂದು ಕೆಲವರು ಸೂಚಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಭ್ರಷ್ಟಾಚಾರ ಆರೋಪದಿಂದ ಪಕ್ಷಕ್ಕೆ ಹಾನಿ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಶಾಸಕರ ಅಸಮಧಾನ ವ್ಯಕ್ತಪಡಿಸಿದ್ದು, ಭ್ರಷ್ಟಾಚಾರದ ಬಗ್ಗೆ ಹೊರಗಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಕಳೆದ ಬಾರಿ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೆವು, ಈಗ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇದು ಸಾರ್ವಜನಿಕವಾಗಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಇದು ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದು ಹಲವು ಶಾಸಕರು ಎಚ್ಚರಿಕೆ ನೀಡಿದ್ದಾರೆ.

