ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಮೇಸ್ಟ್ರಾದ ಸಿಎಂ ಸಿದ್ದರಾಮಯ್ಯ
x

ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಮೇಸ್ಟ್ರಾದ ಸಿಎಂ ಸಿದ್ದರಾಮಯ್ಯ


ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್ (SCSP/TSP) ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಡೀರ್ ಭೇಟಿ ಪರಿಶೀಲನೆ ನಡೆಸಿದರಲ್ಲದೆ ಮಕ್ಕಳಿಗೆ ಪಾಠವನ್ನೂ ಮಾಡಿದರು.

ಮಕ್ಕಳ ಜತೆ ಮೇಸ್ಟ್ರಾದ ಸಿದ್ದರಾಮಯ್ಯ, ಕನ್ನಡ ವ್ಯಾಕರಣ ಪಾಠ ಮಾಡಿದರಲ್ಲದೆ ಕನ್ನಡ ಸಂಧಿಗಳ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟರು.

ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದರು ಸಿದ್ದರಾಮಯ್ಯ. ಮಕ್ಕಳು ತಪ್ಪಿದರೆ, ಸಿಎಂ ಉತ್ತರಗಳನ್ನು ತಿದ್ದಿ ಸರಿಪಡಿಸಿರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನಿಸಿದಾಗ, ವಿದ್ಯಾರ್ಥಿನಿಯೊಬ್ಬಳು ನೀವೇ ಆರಂಭಿಸಿದ್ದು ಎಂದರು. ಇಸವಿ ನೆನಪಿಗೆ ಬಾರದಿದ್ದಾಗ, ಸಿಎಂ 94-95 ರಲ್ಲಿ ಆರಂಭಿಸಿದ್ದಾಗಿ ತಿಳಿಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿದರು!

ಬಸವಣ್ಣನ ಮಹತ್ವ

ಮಕ್ಕಳಿಗೆ ಬಸವಣ್ಣನವರ ಮಹತ್ವವನ್ನೂ ತಿಳಿ ಹೇಳಿದ ಸಿಎಂ, ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂದು ಮಕ್ಕಳಿಗೆ ಕೇಳಿದರು. ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದ ಬಸವಣ್ಣನವರು...ಎಂದು ಸಿಎಂ ತಾವೇ ಮಕ್ಕಳಿಗೆ ವಿವರಿಸಿದರು.

ಶಾಲೆಯ ಲೋಪ ದೋಷ

ಮೊದಲಿಗೆ 10 ನೇ ತರಗತಿಗೆ ಸಿಎಂ ಮತ್ತು ಸಚಿವರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು.

ಊಟದ ವ್ಯವಸ್ಥೆ ಬಗ್ಗೆ ತಿಳಿಸಿದ ವಿದ್ಯಾರ್ಥಿಗಳು .ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದ ವಿದ್ಯಾರ್ಥಿಗಳು. ಆಗಾಗ ಪಲಾವ್ ಕೊಡ್ತಾರೆ ಎಂದು ಸಿಎಂಗೆ ವಿವರಿಸಿದರು. ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರ ಸಿದ್ದರಾಮಯ್ಯ ಅವರಿಗೆ ವಿವರಿಸಿದರು. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದೂ ಮಕ್ಕಳು ಹೇಳಿದರು. ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಇತರರು ಉಪಸ್ಥಿತರಿದ್ದರು.

ಬಳಿಕ ಮಕ್ಕಳ ಜತೆ ಶಾಲೆಯ ಊಟವನ್ನೇ ತಾವೂ ಸವಿದರು ಸಿದ್ದರಾಮಯ್ಯ.

ಮೂಲಸೌಕರ್ಯ

ಬಳಿಕ ಮಾದ್ಯಮದ ಜತೆ ಮಾತನಾಡಿದ ಸಿಎಂ, ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ, ವಸತಿ ಶಾಲೆಗಳಿಗೆ ಇನ್ನಷ್ಟು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 833 ವಸತಿ ಶಾಲೆಗಳಿದ್ದು, ಎಲ್ಲಾ ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲಾ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್‌, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕೋಚಿಂಗ್‌ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.

ಚಾಮರಾಜಪೇಟೆಯ ಸರ್ಕಾರಿ ಶಾಲೆಯನ್ನು ಪಡೆದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇಲ್ಲಿ 218 ಮಕ್ಕಳಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಮಾಡಿದ ಊಟ, ಸಾಂಬಾರ್ ಚೆನ್ನಾಗಿತ್ತು‌ ಎಂದು ಅವರು ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Read More
Next Story