
DISHA Meeting | ಕೇಂದ್ರ ಸರ್ಕಾರದಿಂದ ಸಿಗದ ಅನುದಾನ; ಸಿಎಂ ಸಿದ್ದರಾಮಯ್ಯ ಅಸಮಾಧಾನ
15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11,495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಆದರೆ ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ.
ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಯೋಜನೆ ನಯಾಪೈಸೆ ನೀಡಲಿಲ್ಲ. ರಾಜ್ಯದ ಅನುದಾನದಲ್ಲೇ ಯೋಜನೆ ಮುಂದುವರಿಸಲಾಗುತ್ತಿದೆ. ಅನುದಾನ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಸಾಕಷ್ಟು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ದೂರಿದರು.
ಎರಡು ವರ್ಷದಿಂದ ಪಿಂಚಣಿ ಹಣವನ್ನೂ ನೀಡುತ್ತಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರದಿಂದ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ರಾಜ್ಯದ ಸಂಸದರು ಪ್ರಶ್ನಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು. ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣವೂ ಸೇರಿ ಒಟ್ಟು 11,495 ಕೋಟಿ ರೂ.ಕೇಂದ್ರದಿಂದ ಬರಬೇಕಿದೆ. ಆದರೆ, ಈವರೆಗೆ ಯಾವುದೇ ಅನುದಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2024 - 25ರ ಸಾಲಿನಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ರಾಜ್ಯಕ್ಕೆ 22,758ಕೋಟಿ ರೂ.ಅನುದಾನ ನೀಡಬೇಕಿದೆ. ಆದರೆ ಕೇಂದ್ರ ಸರ್ಕಾರ ಈವರೆಗೆ 18,561ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. 4,197 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸಂಸದರ ವಿರುದ್ಧ ಕಿಡಿ
ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಬಿಜೆಪಿಯ ಯಾವೊಬ್ಬ ಸಂಸದರು ಕೂಡ ಪ್ರಶ್ನಿಸುತ್ತಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಇದನ್ನು ಕೊಡಿಸಲು ಯತ್ನಿಸಬೇಕು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಸಿದ್ದರಾಮಯ್ಯ ಅವರು ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರ ನಿರಂತರವಾಗಿ ಒಟ್ಟು 5,665 ಕೋಟಿ ರೂ.ಪಿಂಚಣಿ ಕೊಡುತ್ತದೆ. ಕೇಂದ್ರ ಸರ್ಕಾರ ಕೇವಲ 559 ಕೋಟಿ ರೂ.ಮಾತ್ರ ಕೊಡಬೇಕು. ಈ ಸಣ್ಣ ಮೊತ್ತವನ್ನೂ ಕೇಂದ್ರ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ರಾಜ್ಯದಿಂದ 4.5 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುವುದಿಲ್ಲ, ಸುಖಾ ಸುಮ್ಮನೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು, ಎರಡು ವರ್ಷದಲ್ಲಿ ಒಮ್ಮೆಯೂ ರಾಜ್ಯದ ಪರವಾಗಿ ಮಾತಾಡಲಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದರು.