CM Siddaramaiah Supports Rahul Gandhis Allegations of Election Fraud in Haryana
x

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ

"ಚುನಾವಣಾ ಆಯೋಗವೇ ಪ್ರಜಾತಂತ್ರದ ಕತ್ತು ಹಿಸುಕುತ್ತಿದೆ": ರಾಹುಲ್ ಗಾಂಧಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಧನಿ

"ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗವೇ ಈ ಪಿತೂರಿಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿ," ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.


Click the Play button to hear this message in audio format

"ಹರಿಯಾಣದಲ್ಲಿ ನಡೆದಿದ್ದು ಚುನಾವಣೆಯಲ್ಲ, ಅದೊಂದು ವ್ಯವಸ್ಥಿತ ಮತಗಳ್ಳತನ. ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಪ್ರಜಾತಂತ್ರದ ಕತ್ತು ಹಿಸುಕುತ್ತಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ 'ವೋಟ್ ಚೋರಿ'ಯನ್ನು ದಾಖಲೆ ಸಮೇತ ಬಯಲಿಗೆಳೆದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಈ ಆರೋಪಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಚುನಾವಣಾ ವ್ಯವಸ್ಥೆಯ ಕರಾಳ ಮುಖ

ರಾಹುಲ್ ಗಾಂಧಿ ಅವರು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಕರಾಳ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. "ಮೊದಲು ಕರ್ನಾಟಕದ ಮಹದೇವಪುರ ಮತ್ತು ಅಳಂದ ವಿಧಾನಸಭಾ ಕ್ಷೇತ್ರಗಳ ಮತಗಳ್ಳತನವನ್ನು ಬಯಲು ಮಾಡಿದ್ದರು. ಇಂದು ಹರಿಯಾಣ ರಾಜ್ಯದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಲಾಗಿದೆ ಎಂಬುದನ್ನು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ," ಎಂದು ಅವರು ತಿಳಿಸಿದ್ದಾರೆ. "ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗವೇ ಈ ಪಿತೂರಿಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿ," ಎಂದು ಅವರು ಆರೋಪಿಸಿದ್ದಾರೆ.

'ಬ್ರೆಜಿಲ್ ರೂಪದರ್ಶಿ' ಬಳಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜು

ಹರಿಯಾಣದಲ್ಲಿ ಮತಗಳ್ಳತನಕ್ಕೆ ಬಿಜೆಪಿ ಮತ್ತು ಚುನಾವಣಾ ಆಯೋಗವು ತೋರಿದ "ನಿರ್ಲಜ್ಜತನ"ವನ್ನು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ. "ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕೇವಲ ಭಾರತೀಯರ ಹೆಸರುಗಳನ್ನು ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದರು. ಆದರೆ ಹರಿಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಬ್ರೆಜಿಲ್‌ನ ರೂಪದರ್ಶಿಯ ಗುರುತನ್ನು ಕೂಡ ತಮ್ಮ ಅಕ್ರಮಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನವನ್ನು ಹರಾಜು ಹಾಕುತ್ತಿದ್ದಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

25 ಲಕ್ಷ ನಕಲಿ ಮತ, ಶೇ.12.5ರಷ್ಟು ವಂಚನೆ!

ಹರಿಯಾಣ ಚುನಾವಣೆಯ ಅಕ್ರಮದ ಅಂಕಿಅಂಶಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, "5 ಲಕ್ಷಕ್ಕೂ ಅಧಿಕ ನಕಲಿ ಮತದಾರರು, ಗುರುತಿಸಲು ಸಾಧ್ಯವಾಗದ ಫೋಟೋ ಬಳಸಿ 1 ಲಕ್ಷಕ್ಕೂ ಅಧಿಕ ಮತಗಳ ಕಳವು ಸೇರಿದಂತೆ, ಒಟ್ಟಾರೆ 25 ಲಕ್ಷಕ್ಕೂ ಹೆಚ್ಚು ಮತಗಳ್ಳತನ ನಡೆದಿದೆ," ಎಂದಿದ್ದಾರೆ. "ಇದರರ್ಥ, ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8 ಜನರಲ್ಲಿ ಒಬ್ಬರು ನಕಲಿ ಮತದಾರ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ," ಎಂದು ಅವರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರು ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ

ಬಹುತೇಕ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಬಿಜೆಪಿ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದರೂ, ಬಿಜೆಪಿ ಹೇಗೆ ಬಹುಮತ ಪಡೆಯಿತು ಎಂಬ ಅನುಮಾನಕ್ಕೆ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ನೇರವಾಗಿ ಗುರಿಯಾಗಿಸಿದ ಅವರು, "ಹಾರಿಕೆ ಉತ್ತರ ನೀಡಿ ಪಲಾಯನ ಮಾಡುವ ಬದಲು, ಈ ಬಾರಿಯಾದರೂ 'ತನ್ನ ಮಾಲೀಕರ' ರಕ್ಷಣೆಗೆ ಮುಂದಾಗದೆ, ಸತ್ಯವನ್ನು ಒಪ್ಪಿಕೊಂಡು, ತಾವು ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ," ಎಂದು ಪರೋಕ್ಷವಾಗಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

Read More
Next Story