
ಸಿಎಂ ಸಿದ್ದರಾಮಯ್ಯ
ಶಿವಮೊಗ್ಗದ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಕೃತ್ಯ: ಸಿಎಂ ಸಿದ್ದರಾಮಯ್ಯ ತೀವ್ರ ಖಂಡನೆ
ಬಿಸಿಯೂಟ ತಯಾರಿಸುವ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತ ತಪ್ಪಿಹೋಗಿದೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
"ಹತ್ತಾರು ಎಳೆಯ ಮಕ್ಕಳ ಮಾರಣಹೋಮ ನಡೆಸುವ ದುರುದ್ದೇಶ ಹೊಂದಿದ್ದ ಈ ಕೃತ್ಯವು ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ ಎನ್ನುವುದು ನನ್ನ ಭಾವನೆ," ಎಂದು ಸಿದ್ದರಾಮಯ್ಯ ಅವರು ಸೋಶಿಯಲ್ ಮೀಡಿಯಾದ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಿಯೂಟ ತಯಾರಿಸುವ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತ ತಪ್ಪಿಹೋಗಿದೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು. "ಮಕ್ಕಳಿಗೆ ಹಾಲು ತಯಾರಿಸಲು ಮುಂದಾದಾಗ ನೀರಿನ ಬಣ್ಣ ಮತ್ತು ವಾಸನೆಯಲ್ಲಿದ್ದ ವ್ಯತ್ಯಾಸವನ್ನು ಗಮನಿಸಿ ತಕ್ಷಣವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಅವರು ಹತ್ತಾರು ಮಕ್ಕಳ ಪ್ರಾಣ ಉಳಿಸಿದ್ದಾರೆ. ಈ ಸಿಬ್ಬಂದಿಯನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂತಹ ಜವಾಬ್ದಾರಿಯುತ ಸಿಬ್ಬಂದಿಯ ಸೇವೆ ಗುರುತಿಸಿಯೇ ನಮ್ಮ ಸರ್ಕಾರ ಇತ್ತೀಚೆಗೆ ಅವರ ಮಾಸಿಕ ಗೌರವಧನವನ್ನು 1,000 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಅವರ ಇಂದಿನ ಕಾರ್ಯ ನಮ್ಮ ನಿರ್ಧಾರವನ್ನು ಮತ್ತಷ್ಟು ಸಾರ್ಥಕಗೊಳಿಸಿದೆ," ಎಂದು ಹೇಳಿದ್ದಾರೆ.
ಮಕ್ಕಳ ಆರೋಗ್ಯ ಸುರಕ್ಷಿತ
ಘಟನೆ ತಿಳಿದ ತಕ್ಷಣ, ಶಾಲೆಯಲ್ಲಿದ್ದ ಎಲ್ಲಾ 18 ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಈ ಹೇಯ ಕೃತ್ಯ ಎಸಗಿರುವ ದುರುಳರನ್ನು ಶೀಘ್ರವಾಗಿ ಪತ್ತೆಹಚ್ಚಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. "ಎಳೆಯ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ಸಮಾಜದಲ್ಲಿನ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ. ಈ ಬಗ್ಗೆ ಸಮಾಜದ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ," ಎಂದು ಅವರು ಹೇಳಿದರು.