ಭಂಡತನ ಬಿಟ್ಟು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ವಿಜಯೇಂದ್ರ ಆಗ್ರಹ
ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದರ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʻʻಗೌರವಾನ್ವಿತ ರಾಜ್ಯಪಾಲರು ತಮ್ಮ ಸಂವಿಧಾನ ದತ್ತ ಅಧಿಕಾರ ಚಲಾಯಿಸಿ ಮುಖ್ಯಮಂತ್ರಿಗಳ ಮುಡಾ ಹಗರಣದ ದೂರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆʼʼ ಎಂದಿದ್ದಾರೆ.
ʻʻಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಭಂಡತನ ಪ್ರದರ್ಶಿಸುತ್ತಿದ್ದ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿʼʼ ಎಂದು ಒತ್ತಾಯಿಸಿದ್ದಾರೆ.