ಕಾರ್ಯಕರ್ತರ ಜನಸ್ಪಂದನ | ಸಿಎಂ ಅಹವಾಲು ಸ್ವೀಕಾರ; ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ
x

ಕಾರ್ಯಕರ್ತರ ಜನಸ್ಪಂದನ | ಸಿಎಂ ಅಹವಾಲು ಸ್ವೀಕಾರ; ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟರು. ಇನ್ನೂ ಕೆಲವು ಕಾರ್ಯಕರ್ತರು ತಮ್ಮ ಮಕ್ಕಳ ಶಾಲೆಯ ಶುಲ್ಕ ಪಾವತಿಗೆ ಸಹಾಯ, ನಿಗಮ ಮಂಡಳಿಯಲ್ಲಿ ಅವಕಾಶ ಸೇರಿದಂತೆ ಅನೇಕ ಅಹವಾಲುಗಳನ್ನು ಸಿಎಂ ಸಿದ್ದರಾಮಯ್ಯ ಎದುರು ಹೇಳಿಕೊಂಡರು.


ನಗರ ಪಾಲಿಕೆಯವರ ಕಿರುಕುಳದಿಂದ ರಕ್ಷಣೆ ಕೊಡಿ ಎಂದ ಹುಬ್ಬಳ್ಳಿ-ಧಾರವಾಡ ಬೀದಿ ಬದಿ ವ್ಯಾಪಾರಿಗಳು, ಎಂ ಎ ಪದವಿ ಪಡೆದಿದ್ದೇನೆ ನೌಕರಿ ಕೊಡಿಸಿ ಎಂದ ಮಹಿಳೆ, ಕೆಎಂಎಫ್‌ನಲ್ಲಿ ಹಾಲು ಉತ್ಪಾದಕರ ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಫ್ಟ್‌ವೇರ್‌ ಮಾಡಿ ಎಂದ ಹಾಲು ಉತ್ಪಾದಕ, ನನಗೆ ಮನೆ ಕೊಟ್ಟು ವಸತಿ ರಾಮಯ್ಯ ಆಗಿ ಎಂದ ಕಾರ್ಯಕರ್ತೆ,..

ಹೀಗೆ ಶನಿವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಮುಖ್ಯಮಂತ್ರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನೂರಾರು ಬೇಡಿಕೆಗಳನ್ನು ಮುಂದಿಟ್ಟರು.

ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಿದರು. ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದರು. ಸುಮಾರು 712 ಜನ ಗೂಗಲ್ ಫಾರಂನಲ್ಲಿ ನೋಂದಣಿಯಾಗಿದ್ದು, ಅದಲ್ಲದೆ ನೇರವಾಗಿ ನೋಂದಣಿ ಮಾಡಿಸಿದವರು ಸೇರಿದಂತೆ ಒಟ್ಟು ನಾಲ್ಕು ಸಾವಿರ ಮಂದಿ ನೋಂದಣಿ ಮಾಡಿಸಿದ್ದರು. ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಆಗಮಿಸಿದ ಸಾವಿರಕ್ಕೂ ಹೆಚ್ಚು ಜನರ ಹೆಸರು, ವಿಳಾಸ, ಪಕ್ಷದ ಸದಸ್ಯತ್ವ ಸಂಖ್ಯೆಯನ್ನು ಪರಿಶೀಲಿಸಿ, ಕೆಪಿಸಿಸಿ ಕಚೇರಿ ಸಿಬ್ಬಂದಿ ಅರ್ಜಿ ಸಂಖ್ಯೆ ನೀಡಿದ್ದರು. ಅದರಂತೆ ಕಾರ್ಯಕರ್ತರು ಒಬ್ಬೊಬ್ಬರಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಈ ವೇಳೆ ಮಹಿಳೆ ಕಾರ್ಯಕರ್ತೆಯೊಬ್ಬರು ತಾವು ಎಂಎ ಪದವಿ ಪಡೆದಿದ್ದು, ಕೆಲಸ ಕೊಡಿಸುವಂತೆ ಮನವಿ ಮಾಡಿದರು. ನಿಮಗೆ ಪಾಠ ಮಾಡೋಕೆ ಸಾಧ್ಯವೇ ಎಂದು ವಿಚಾರಿಸಿದ ಮುಖ್ಯಮಂತ್ರಿ, ಅವಕಾಶ ಕೊಡಿಸುವುದಾಗಿ ಭರವಸೆ ನೀಡಿದರು.

ನಗರ ಪಾಲಿಕೆಯವರು ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಇದಕ್ಕೆ ಗರಂ ಆದ ಸಿಎಂ, ಕೂಡಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು ಎನ್ನುವ ತಾಕೀತು ಮಾಡಿದರು.

ರೈತ ಸ್ನೇಹಿ ಸಾಫ್ಟ್‌ವೇರ್‌ ಮಾಡಿ

ಸದ್ಯ ಕೆಎಂಎಫ್ ನಲ್ಲಿರುವ ಸಾಫ್ಟ್ ವೇರ್ ಹಾಲು ಉತ್ಪಾದಕರಿಗೆ ಅನುಕೂಲಕರ ಆಗಿಲ್ಲದೇ ಇರುವುದರಿಂದ ಅನುಕೂಲವಾದ ಕನ್ನಡ ಸಾಫ್ಟ್ ವೇರ್ ಅಳವಡಿಸುವಂತೆ ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಅವರು ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳು ಸ್ಥಳದಲ್ಲೇ ಕೆಎಂಎಫ್ ಎಂಡಿ ಅವರಿಗೆ ಸಂಪರ್ಕಿಸಿ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾಫ್ಟ್ ವೇರ್ ಅಳವಡಿಸುವಂತೆ ಸೂಚನೆ ನೀಡಿದರು.

ಮಹಿಳೆಯೊಬ್ಬರು ಮನೆಗೆ ಬೇಡಿಕೆ ಇಟ್ಟು, ಗೃಹಲಕ್ಷ್ಮೀ, ಅನ್ನಭಾಗ್ಯದ ಹಣ ಬರುತ್ತಿದೆ. ಶಕ್ತಿ ಯೋಜನೆ ಬಗ್ಗೆ ಪುರುಷರು ಟೀಕೆ ಮಾಡುತ್ತಿದ್ಧಾರೆ. ಬಸ್ ಫ್ರೀ ಇರುವುದು ತಮಗೆ ಅನುಕೂಲವಾಗಿದೆ. ಅನ್ನ ಕೊಟ್ಟು ಅನ್ನರಾಮಯ್ಯ ಆಗಿರುವ ಸಿದ್ದರಾಮಯ್ಯ, ವಸತಿ ನೀಡಿ ವಸತಿ ರಾಮಯ್ಯ ಆಗಲಿ ಎಂದು ಹೇಳಿದರು. ಅದಕ್ಕೆ ಸ್ಪಂದಿಸಿದ ಸಿಎಂ, ಅವರಿಗೆ ವಸತಿ ಯೋಜನೆಯಡಿ ಮನೆ ನೀಡುವ ಭರವಸೆ ನೀಡಿದರು.

ದೇವರು ಎಂದವರಿಗೆ ಪದಾಧಿಕಾರಿ ಹುದ್ದೆ

ಕಾರ್ಯಕರ್ತೆಯೊಬ್ಬರು, ನಿಮ್ಮನ್ನ ನೋಡಿದರೆ ದೇವರನ್ನು ನೋಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದರು. ʻʻನನಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿ, ಪಕ್ಷ ಸಂಘಟನೆ ಮಾಡುತ್ತೇನೆʼʼ ಎಂದು ಮನವಿ ಸಲ್ಲಿಸಿದರು. ಅವರಿಗೆ ಪಕ್ಷದ ಪದಾಧಿಕಾರಿಯನ್ನಾಗಿ ನಾಳೆಯೇ ನೇಮಕ ಮಾಡುವುದಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ಭರವಸೆ ನೀಡಿದರು.

ಇನ್ನು ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟರು. ಇನ್ನೂ ಕೆಲವು ಕಾರ್ಯಕರ್ತರು ತಮ್ಮ ಮಕ್ಕಳ ಶಾಲೆಯ ಶುಲ್ಕ ಪಾವತಿಗೆ ಸಹಾಯ, ನಿಗಮ ಮಂಡಳಿಯಲ್ಲಿ ಅವಕಾಶ ಸೇರಿದಂತೆ ಅನೇಕ ಅಹವಾಲುಗಳನ್ನು ಸಿಎಂ ಸಿದ್ದರಾಮಯ್ಯ ಎದುರು ಹೇಳಿಕೊಂಡರು.

ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಕಾರ್ಯಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ತನ್ವೀರ್ ಶೆಠ್, ವಸಂತ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಮಧ್ಯಾಹ್ನ 2 ಗಂಟೆಯ ಬಳಿಕ ಪೂರ್ವನಿಗದಿತ ಕಾರ್ಯಕ್ರಮಕ್ಕೆ ತೆರಳಬೇಕಿರುವುದರಿಂದ ಟೋಕನ್ ಸಂಖ್ಯೆ ಇಲ್ಲದವರ ಅರ್ಜಿಗಳನ್ನು ನೇರವಾಗಿ ಪಡೆದುಕೊಳ್ಳಲಾಯಿತು. ದೂರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ಪ್ರತಿ ತಿಂಗಳು ಕನಿಷ್ಠ ಎರಡು ಬಾರಿ ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ಮನವಿ ಮಾಡಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.

Read More
Next Story