ಕೇಂದ್ರ ಸಚಿವ ನಿತಿನ್ ಗಡ್ಕರಿ- ಸಿಎಂ ಸಿದ್ದರಾಮಯ್ಯ ಭೇಟಿ | ಹೆದ್ದಾರಿ ಯೋಜನೆಗಳ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜೂ.28) ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಹೆದ್ದಾರಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ರಾಜ್ಯದ ಬೆಳಗಾವಿ–ಹುನಗುಂದ-ರಾಯಚೂರು (NH748A), ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ, ಸೂರತ್-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ, ಬೆಂಗಳೂರು ನಗರದ ಉಪನಗರ ವರ್ತುಲ ರಸ್ತೆ ಗ್ರೀನ್‌ಫೀಲ್ಡ್ ಕಾರಿಡಾರ್‌ಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಕ್ಕೆ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ಈ ಮನವಿ ಪತ್ರದಲ್ಲಿ 5225ಕಿ.ಮೀ. ಉದ್ದದ 39 ತಾತ್ವಿಕ ಅನುಮೋದನೆ ದೊರಕಿದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಕ್ರಿಯೆ ದೀರ್ಘಾವಧಿ ಸಮಸ್ಯೆಯಾಗಿ ಉಳಿದಿದೆ, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ರಾಜ್ಯ ಸರ್ಕಾರದ ಪ್ರಸ್ತಾವನೆಯ ಪ್ರಮುಖ ವಿಷಯಗಳು
• ದಿನಕ್ಕೆ 10,000 ಪಿಸಿಯು ವಾಹನ ದಟ್ಟಣೆ ಹೊಂದಿರುವ ರಾಜ್ಯ ಹೆದ್ದಾರಿಗಳನ್ನು ಉನ್ನತೀಕರಿಸಲು ಮನವಿ ಮಾಡಲಾಯಿತು
• ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ಟನೆಲ್ ನಿರ್ಮಾಣದ ಮೂಲಕ ಮಂಗಳೂರು ಬಂದರು ಸಂಪರ್ಕ ಇನ್ನಷ್ಟು ಸುಗಮಗೊಳಿಸುವುದು
• ಮೈಸೂರು ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಕೊಲಂಬಿಯ ಏಷ್ಯಾ ಆಸ್ಪತ್ರೆ) ನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ
• ಮೈಸೂರು ರಿಂಗ್ ರಸ್ತೆಯಲ್ಲಿ NH-275K ನಲ್ಲಿ 9 ಗ್ರೇಡ್ ಸೆಪರೇಟರುಗಳ ನಿರ್ಮಾಣಕ್ಕೆ ಅನುಮೋದನೆ
• ಬೆಳಗಾವಿ ನಗರದಲ್ಲಿ ಹಳೆ NH4 ನಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಅನುಮೋದನೆ
• ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತದಲ್ಲಿ ಕೇಬಲ್ ಕಾರ್ ಸೌಲಭ್ಯ ಕಲ್ಪಿಸುವ ಯೋಜನೆ
• ಕಿತ್ತೂರು ಪಟ್ಟಣದಿಂದ ಬೈಲಹೊಂಗಲವನ್ನು ಸಂಪರ್ಕಿಸುವ ರಸ್ತೆಯ ಸುಧಾರಣೆ
• ಕಲಬುರಗಿ ಮತ್ತು ರಾಯಚೂರಿನಲ್ಲಿ ಬೈಪಾಸ್ ನಿರ್ಮಾಣ
• NH-373 ರ ಬೇಲೂರು ಚಿಕ್ಕಮಗಳೂರು ವಿಭಾಗದಲ್ಲಿ ಚತುಷ್ಪಧ ನಿರ್ಮಾಣ
• ಚಳ್ಳಕೆರೆ ಪಟ್ಟಣ ವ್ಯಾಪ್ತಿಯಲ್ಲಿ NH-150A ಯ ಒಂದು ಬಾರಿ ಸುಧಾರಣೆ
• ರಾಷ್ಟ್ರೀಯ ಹೆದ್ದಾರಿ NH-766 ರ 106 ಕಿ.ಮೀ. ರಸ್ತೆಯನ್ನು ಚತುಷ್ಪಥ, ಆರು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವುದು
• ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿರುವ ಕೇರಳದ ಕಲ್ಪೆಟ್ಟದಿಂದ ಮಾನಂದವಾಡಿ, ಹೆಚ್.ಡಿ.ಕೋಟೆ, ಜಯಪುರ ಮೂಲಕ ಮೈಸೂರನ್ನು ಸಂಪರ್ಕಿಸುವ 90 ಕಿ.ಮೀ. ಹೆದ್ದಾರಿ, ಮೈಸೂರಿನಿಂದ ಬನ್ನೂರು ಮೂಲಕ ಮಳವಳ್ಳಿಯನ್ನು ಸಂಪರ್ಕಿಸುವ 45 ಕಿ.ಮೀ. ಹೆದ್ದಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಗೋಕಾಕ- ಯರಗಟ್ಟಿ-ಮನ್ವಳ್ಳಿ ಮೂಲಕ ನರಗುಂದವನ್ನು ಸಂಪರ್ಕಿಸುವ 127 ಕಿ.ಮೀ. ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ನಿತಿನ್ ಗಡ್ಕರಿ ಭೇಟಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಶಾಲಿನಿ ರಜನೀಶ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಸೇರಿ ಮೊದಲಾದವರು ಉಪಸ್ಥಿತರಿದ್ದರು.
ಮನವಿ ಪತ್ರವನ್ನು ಎಕ್ಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ʻʻಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಕರ್ನಾಟಕದ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿರ್ಣಾಯಕ ಬೇಡಿಕೆಗಳೊಂದಿಗೆ ಪತ್ರವನ್ನು ಮಂಡಿಸಿದರು. ನಮ್ಮ ರಾಜ್ಯದ ಬೆಳವಣಿಗೆ ಮತ್ತು ಪ್ರಗತಿಗೆ ಚಾಲನೆ ನೀಡಲು ಬದ್ಧವಾಗಿದೆʼʼ ಎಂದು ಪೋಸ್ಟ್ ಮಾಡಲಾಗಿದೆ.
Chief Minister Shri @siddaramaiah met with Union Minister for Road Transport and Highways @nitin_gadkari in New Delhi today, presenting a letter with crucial demands for the development of Karnataka's road infrastructure. Committed to driving growth and progress in our state. pic.twitter.com/Bb1w8T8qqg
— CM of Karnataka (@CMofKarnataka) June 28, 2024