
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ: ಹೈಕಮಾಂಡ್‌ನೊಂದಿಗೆ ಬಿರುಸಿನ ರಾಜಕೀಯ ಸಮಾಲೋಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಎರಡು ದಿನಗಳಿನಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಮಂಗಳವಾರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನಗಳ ದೆಹಲಿ ಪ್ರವಾಸದಲ್ಲಿ ಹೈಕಮಾಂಡ್ ನಾಯಕರೊಂದಿಗೆ ಬಿರುಸಿನ ರಾಜಕೀಯ ಸಮಾಲೋಚನೆ ನಡೆಸಿದ್ದು, ರಾಜ್ಯದ ರಾಜಕೀಯ ಬೆಳವಣಿಗೆಗಳು, ಪಕ್ಷದ ಆಂತರಿಕ ವಿಚಾರಗಳು ಹಾಗೂ ಸರ್ಕಾರದ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಬುಧವಾರ, ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಸೂಕ್ಷ್ಮ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು. ಈ ಭೇಟಿಯ ವೇಳೆ ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಶಾಸಕರ ಅಸಮಾಧಾನ ಹಾಗೂ ಅದರ ಸಂಭಾವ್ಯ ಪರಿಣಾಮಗಳ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಶಾಸಕರ ಅಸಮಾಧಾನ ಬಹಿರಂಗವಾಗಿ ವ್ಯಕ್ತವಾಗುವುದು ಸರ್ಕಾರ ಮತ್ತು ಪಕ್ಷಕ್ಕೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು ಎಂದು ಸೂಚನೆ ನೀಡಿದ ವೇಣುಗೋಪಾಲ್, ಈ ಅಸಮಾಧಾನವನ್ನು ಸಮರ್ಥವಾಗಿ ನಿಭಾಯಿಸುವಂತೆ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ವಿಧಾನ ಪರಿಷತ್‌ಗೆ ನಾಮನಿರ್ದೇಶನ ಕುರಿತಾದ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಖರ್ಗೆ, ಸುರ್ಜೆವಾಲಾ ಅವರೊಂದಿಗೆ ಮಹತ್ವದ ಚರ್ಚೆ
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಹಲವು ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಮಂಗಳವಾರ, ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆಗಳನ್ನು ನಡೆಸಿದ್ದರು.
ಕೇಂದ್ರ ನಾಯಕರ ಭೇಟಿ ಹಾಗೂ ಬಾಕಿ ಯೋಜನೆಗಳು
ಸಿಎಂ ಸಿದ್ದರಾಮಯ್ಯ ಅವರು ಸೋಮವಾರ (ಜೂನ್ 23) ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ಭೇಟಿಯ ಮುಖ್ಯ ಉದ್ದೇಶ ರಾಜ್ಯದ ಕೆಲವು ಬಾಕಿ ವಿಧೇಯಕಗಳಿಗೆ ಸಹಿ ಹಾಕುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸುವುದಾಗಿತ್ತು. ಜೊತೆಗೆ, ಕೇಂದ್ರ ಸರ್ಕಾರದಿಂದ ರಾಜ್ಯದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಅವರು ಉದ್ದೇಶಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯಾವಕಾಶ ಕೋರಿದ್ದಾರೆ. ಅವಕಾಶ ಸಿಕ್ಕರೆ, ಅವರು ಬುಧವಾರ (ಜೂನ್ 25) ಪ್ರಧಾನಿಯವರೊಂದಿಗೆ ರಾಜ್ಯದ ಯೋಜನೆಗಳು ಮತ್ತು ಅನುದಾನದ ಬಿಡುಗಡೆ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ವಾಪಸಾದರೆ, ಅವರನ್ನು ಭೇಟಿ ಮಾಡಿ ವಿಧಾನಪರಿಷತ್ ಸದಸ್ಯರ ನೇಮಕಾತಿಯ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.