
ದಾಬಸ್ ಪೇಟೆ- ದೊಡ್ಡಬಳ್ಳಾಪುರ ನಡುವೆ ತಲೆಎತ್ತಲಿದೆ ಕ್ವಿನ್ ಸಿಟಿ: ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ
`ಕರ್ನಾಟಕವು ದೇಶದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕ್ವಿನ್ ಸಿಟಿಯು ಕರ್ನಾಟಕ ಮತ್ತು ಭಾರತದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ. ಇಲ್ಲಿ ಜಾಗತಿಕ ಮಟ್ಟದ ಸಹಭಾಗಿತ್ವ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಇರಲಿದ್ದು, `ಸ್ಮಾರ್ಟ್ ಲಿವಿಂಗ್ ಪರಿಕಲ್ಪನೆಗೆ ಒತ್ತು ಕೊಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಸುಸ್ಥಿರ ಬೆಳವಣಿಗೆ ಸಾಧಿಸಲಾಗುವುದುʼ
ರಾಜಧಾನಿಗೆ ಸಮೀಪದ ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರದ ನಡುವೆ ಅಭಿವೃದ್ಧಿಪಡಿಸಲಿರುವ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆಯ ಮೊದಲ ಹಂತದ ಯೋಜನೆಗೆ ಗುರವಾರ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, `ಕರ್ನಾಟಕವು ದೇಶದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕ್ವಿನ್ ಸಿಟಿಯು ಕರ್ನಾಟಕ ಮತ್ತು ಭಾರತದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ. ಇಲ್ಲಿ ಜಾಗತಿಕ ಮಟ್ಟದ ಸಹಭಾಗಿತ್ವ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಇರಲಿದ್ದು, `ಸ್ಮಾರ್ಟ್ ಲಿವಿಂಗ್ ಪರಿಕಲ್ಪನೆಗೆ ಒತ್ತು ಕೊಡಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಸುಸ್ಥಿರ ಬೆಳವಣಿಗೆ ಸಾಧಿಸಲಾಗುವುದುʼ ಎಂದರು.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, `ಬೆಂಗಳೂರಿನ ಕೈಗಾರಿಕಾ ಬೆಳವಣಿಗೆಗೆ ಹೇರಳ ಅವಕಾಶಗಳಿದ್ದು, ಇದನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ. ಎರಡು ವಾರಗಳಲ್ಲಿ ಕಾವೇರಿ 5ನೇ ಹಂತದ ಕುಡಿಯುವ ನೀರು ಪೂರೈಕೆ ಆರಂಭವಾಗಲಿದ್ದು, 20 ವರ್ಷಗಳ ಕಾಲ ನೀರಿನ ಕೊರತೆ ಇರುವುದಿಲ್ಲ. ಹಾಗೆಯೇ ವಿದ್ಯುತ್ ತೊಂದರೆ ಕೂಡ ಇಲ್ಲ. ಸಂಚಾರ ವ್ಯವಸ್ಥೆಯಲ್ಲಿ ತುಸು ಸಮಸ್ಯೆ ಇರುವುದು ನಿಜ. ಅದನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿರುವಷ್ಟು ಪ್ರತಿಭಾನ್ವಿತ ಮಾನವ ಸಂಪನ್ಮೂಲ ಕೈಗಾರಿಕೆಗಳಿಗೆ ಇನ್ನೆಲ್ಲೂ ಸಿಕ್ಕುವುದಿಲ್ಲʼ ಎಂದು ಹೇಳಿದರು.
ವೈಶಿಷ್ಟ್ಯಪೂರ್ಣ ಯೋಜನೆ
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, `ಒಟ್ಟು 5,800 ಎಕರೆಯಲ್ಲಿ ಕ್ವಿನ್ ಸಿಟಿಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಇದನ್ನು ಸಾಕಾರಗೊಳಿಸಲಾಗುವುದು. 5 ಲಕ್ಷ ಜನವಸತಿಯ ಗುರಿಯುಳ್ಳ ಈ ಪ್ರದೇಶದಲ್ಲಿ ಶೇ 40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. ಜೊತೆಗೆ 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ 465 ಎಕರೆ, ವರ್ಷಕ್ಕೆ 7 ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲು 200 ಎಕರೆ, ಶೇ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆ ಇರಲಿದೆ’ಎಂದರು.
ಉದ್ದೇಶಿತ ನಗರದಲ್ಲಿ ಮೊದಲಿಗೆ ಅತ್ಯುತ್ತಮ ಗುಣಮಟ್ಟದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಜಗತ್ತಿನ ಅಗ್ರ 500 ವಿ.ವಿ.ಗಳು ತಮ್ಮ ಕ್ಯಾಂಪಸ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸಿದರು.
ಕ್ವಿನ್ ಸಿಟಿಯು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮತ್ತು ಶ್ರೇಷ್ಠತೆಗೆ ಮಾನದಂಡವಾಗಿ ಹೊರಹೊಮ್ಮಲಿದೆ. ಬೆಂಗಳೂರಿನಲ್ಲಿರುವ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ನವೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳ ಕಾರ್ಯ ಪರಿಸರವನ್ನು ಇದಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗುವುದು. ಇಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಳು ನಾಲ್ಕು ಪ್ರಮುಖ ವಲಯಗಳಾಗಿದ್ದು, ಮುಂಬರುವ ದಿನಗಳ ಸ್ಮಾರ್ಟ್ ಸಿಟಿಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್ ಕೆ ಪಾಟೀಲ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಡಾ.ಎಂ ಸಿ ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ ಎನ್ ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಮಂಕಾಳ ವೈದ್ಯ, ಬೋಸರಾಜು, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ರಹೀಂ ಖಾನ್, ಆರ್ ಬಿ ತಿಮ್ಮಾಪುರ, ಹಿರಿಯ ಶಾಸಕ ಆರ್ ವಿ ದೇಶಪಾಂಡೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಉದ್ಯಮಿಗಳಾದ ಪ್ರಶಾಂತ್ ಪ್ರಕಾಶ್, ಗೀತಾಂಜಲಿ ಕಿರ್ಲೋಸ್ಕರ್, ರಂಗೇಶ್ ರಾಘವನ್, ವೈದ್ಯ ಡಾ.ವಿವೇಕ ಜವಳಿ ಉಪಸ್ಥಿತರಿದ್ದರು.