
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿ.ಎಂ ಭಾಗಿ; ಡಿಕೆಶಿಗೆ ಇಲ್ಲದ ಆಹ್ವಾನ
ದೆಹಲಿಗೆ ಹೊರಟ ಸಿ.ಎಂ; ‘ಕೈ’ ಕಾರ್ಯಕಾರಿಣಿ ಸಭೆಗೆ ಡಿಕೆಶಿಗಿಲ್ಲ ಆಹ್ವಾನ: ಕುತೂಹಲ ಕೆರಳಿಸಿದ ಹೈಕಮಾಂಡ್ ನಡೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಈ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂಗೆ ಬುಲಾವ್ ಬಂದಿದೆ ಎನ್ನಲಾಗಿದೆ.
ಡಿಕೆಶಿಗೆ ಇಲ್ಲ ಆಹ್ವಾನ
ಇನ್ನೊಂದೆಡೆ, ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಕಾರ್ಯಕಾರಿ ಸಮಿತಿ ಸಭೆಗೆ ಆಹ್ವಾನ ಬಂದಿಲ್ಲದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮಗೆ ಆಹ್ವಾನ ಬಾರದಿರುವ ಕುರಿತು ಗುರುವಾರ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ಡಿ.ಕೆ. ಶಿವಕುಮಾರ್, "ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿರುವುದು ನನಗೆ ತಿಳಿದಿದೆ. ಆದರೆ ನನಗೆ ಆಹ್ವಾನ ಬಂದಿಲ್ಲ. ಪಕ್ಷ ಕರೆದರೆ ನಾನು ಎಲ್ಲಿಗೆ ಬೇಕಿದ್ದರೂ ಹೋಗಲು ಸಿದ್ಧ" ಎಂದು ಹೇಳಿದ್ದರು.
ಈ ಮಹತ್ವದ ಸಭೆಯಲ್ಲಿ ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಿಸುವ ಕುರಿತು ತಂತ್ರಗಾರಿಕೆ, ಮತ ಕಳ್ಳತನ ಆರೋಪ, ನ್ಯಾಷನಲ್ ಹೆರಾಲ್ಡ್ ಪ್ರಕರಣ ಹಾಗೂ ಮನರೇಗಾ ಕಾಯ್ದೆ ತಿದ್ದುಪಡಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ರೂಪಿಸುವ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, "ನಾನು ಕಾರ್ಯಕಾರಿ ಸಮಿತಿ ಸಭೆಯ ಸದಸ್ಯನಲ್ಲ, ಒಂದು ವೇಳೆ ಹೈಕಮಾಂಡ್‌ನಿಂದ ಆಹ್ವಾನ ಬಂದರೆ ಖಂಡಿತ ಹೋಗುತ್ತೇನೆ" ಎಂದು ಹೇಳಿದ್ದರು. ಇದೀಗ ಹೈಕಮಾಂಡ್‌ನಿಂದ ಅಧಿಕೃತ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ತೆಲಂಗಾಣದ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು ಭಾಗಿಯಾಗಲಿದ್ದಾರೆ. ರಾಜ್ಯದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಾಸೀರ್ ಹುಸೇನ್ ಹಾಗೂ ವೀರಪ್ಪ ಮೊಯ್ಲಿ ಪಾಲ್ಗೊಳ್ಳಲಿದ್ದಾರೆ.
ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿದ್ದೇನೆ ಎಂದಿದ್ದ ಡಿಕೆಶಿ
ಈ ನಡುವೆ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುವಾರ ಭೇಟಿ ಮಾಡಿದ್ದರು. ಖರ್ಗೆ ಅವರ ಬೆಂಗಳೂರು ನಿವಾಸಕ್ಕೆ ತೆರಳಿದ್ದ ಡಿಕೆ ಶಿವಕುಮಾರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಖರ್ಗೆ ಅವರನ್ನು ಭೇಟಿ ಅದ ಬಳಿಕ ಡಿಕೆ ಶಿವಕುಮಾರ್ ಮಾತಿನ ಧಾಟಿಯಲ್ಲೂ ವ್ಯತ್ಯಾಸ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿದ್ದೇನೆ, ಬಾವುಟ ಕಟ್ಟಿದ್ದೇನೆ ಎಂದಿದ್ದರು. ಅಲ್ಲದೆ, ವೇದಿಕೆಗೆ ಬಂದು ಕೇವಲ ಭಾಷಣ ಮಾಡಿಕೊಂಡು ಹೋಗಿಲ್ಲ ಎಂದಿದ್ದರು.

