ರಾಜಕೀಯ ನಿವೃತ್ತಿಯ ಸುಳಿವು ನೀಡಿದರೇ ಮುಖ್ಯಮಂತ್ರಿ ಸಿದ್ದರಾಮಯ್ಯ
x

ರಾಜಕೀಯ ನಿವೃತ್ತಿಯ ಸುಳಿವು ನೀಡಿದರೇ ಮುಖ್ಯಮಂತ್ರಿ ಸಿದ್ದರಾಮಯ್ಯ

errನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಮುಖ್ಯ. ಇಲ್ಲದಿದ್ದರೆ ರಾಜಕೀಯದಲ್ಲಿ ಉಳಿಗಾಲ ಇರುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.


ರಾಜ್ಯದ ಮೂರೂ ಕ್ಷೇತ್ರಗಳ ಉಪಚುನಾವಣೆ ಗೆಲುವು, ಹಾಸನದ ಜನಕಲ್ಯಾಣ ಸಮಾವೇಶ ಯಶಸ್ಸಿನ ನಡುವೆಯೂ ಸಿಎಂ ಸಿದ್ದರಾಮಯ್ಯ, ರಾಜಕೀಯ ನಿವೃತ್ತಿಯ ಸುಳಿವು ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

"ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ" ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಮುಡಾ ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಯ ಉರುಳು ಬಿಗಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ನಿವೃತ್ತಿಯ ಸುಳಿವು ನೀಡಿದರೆ? ಎಂಬ ಪ್ರಶ್ನೆಯೂ ಕಾಡುತ್ತಿದೆ.

ಸಿಎಂ ಹೇಳಿದ್ದೇನು?

ಚಾಮರಾಜನಗರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಾ, "ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಮುಖ್ಯ. ಇಲ್ಲದಿದ್ದರೆ ರಾಜಕೀಯದಲ್ಲಿ ಉಳಿಗಾಲ ಇರುವುದಿಲ್ಲ" ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

"ಈ ಹಿಂದೆ ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆ ಮನೆ ಮಾಡಿತ್ತು. ಜೆ.ಹೆಚ್.ಪಟೇಲ್‌ ಅವರಿಗೆ ಆಗಿನ ಕೆಲ ಶಾಸಕರು ಕೂಡ ಚಾಮರಾಜನಗರಕ್ಕೆ ಹೋಗದಂತೆ ಹೇಳಿದ್ದರು. ಅಂದಿನಿಂದ ಚಾಮರಾಜನಗರ ಮೇಲೆ ಕಳಂಕ ಇತ್ತು. ಆದರೆ, ನಾನು ಈಗ 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಜಿಲ್ಲೆಗೆ ಬಂದಾಗಲೆಲ್ಲಾ ಸಿಎಂ ಕುರ್ಚಿ ಗಟ್ಟಿಯಾಗಿದೆ" ಎಂದು ಹೇಳುವ ಮೂಲಕ ಮುಡಾ ಹಗರಣ ಕುರಿತು ಪ್ರತಿಪಕ್ಷ ನಾಯಕರ ಹೇಳಿಕೆಗಳಿಗೆ ಪರೋಕ್ಷ ತಿರುಗೇಟು ನೀಡಿದ್ದಾರೆ.

"ನಾನು ಈ ಹಿಂದೆ ಅವಿಭಜಿತ ಮೈಸೂರಿನ ಭಾಗವಾಗಿದ್ದ ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದೆ. ಅಂದು ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾನು ಈವರೆಗೆ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಇಲ್ಲಿಗೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗುತ್ತಾ ಹೋಗುತ್ತಿದೆ" ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಬಿಗಿಯಾದ ಉರುಳು

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿಯವರಿಗೆ 14 ಮುಡಾ ನಿವೇಶನ ಹಂಚಿಕೆ ಸಂಬಂಧ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಈಚೆಗೆ ಇಡಿ ಅಧಿಕಾರಿಗಳು ಲೋಕಾಯುಕ್ತರೊಂದಿಗೆ ಹಂಚಿಕೊಂಡ ತನಿಖಾ ಮಾಹಿತಿಯಲ್ಲಿ ನಿವೇಶನ ಪಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬಳಸಿರುವುದನ್ನು ಬೊಟ್ಟು ಮಾಡಿದ್ದಾರೆ.

ಇನ್ನೊಂದೆಡೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿರುವ ಅರ್ಜಿ ಹೈಕೋರ್ಟ್‌ ಅಂಗಳದಲ್ಲಿದೆ. ಜೊತೆಗೆ ಮೈಸೂರಿನ ವಕೀಲರೊಬ್ಬರು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದ್ದು, ರಾಜಕೀಯ ನಿವೃತ್ತಿ ಸುಳಿವು ನೀಡಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಅಧಿಕಾರ ಹಂಚಿಕೆ ಒಪ್ಪಂದ

ರಾಜ್ಯದಲ್ಲಿ 2023 ಮೇ 10 ರಂದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಪೈಪೋಟಿ ನಡೆದಾಗ ಹೈಕಮಾಂಡ್‌ ಅಧಿಕಾರ ಹಂಚಿಕೆಯ ಸೂತ್ರ ಮುಂದಿಟ್ಟಿತ್ತು. ಅದರಂತೆ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಉಳಿದ ಅವಧಿಗೆ ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಕುರಿತು ಒಪ್ಪಂದ ನಡೆದಿತ್ತು ಎನ್ನಲಾಗುತ್ತಿದೆ.

2025 ರ ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅವಧಿ ಪೂರ್ಣಗೊಳ್ಳಲಿದ್ದು, ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕಾಗುತ್ತದೆ. ಈಗಾಗಲೇ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ಜೋರಾಗಿದೆ. ಒಂದು ವೇಳೆ ಹೈಕಮಾಂಡ್‌ ಅಧಿಕಾರ ಹಸ್ತಾಂತರಕ್ಕೆ ಸೂಚಿಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಈ ಎಲ್ಲ ಸಾಧ್ಯತೆಗಳನ್ನು ಅವಲೋಕಿಸಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯ ಸುಳಿವು ನೀಡಿರಬಹುದು ಎಂದೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಒಟ್ಟಾರೆ, ಮುಖ್ಯಮಂತ್ರಿಗಳ ಹೇಳಿಕೆ ರಾಜಕೀಯ ವಲಯದಲ್ಲಿ ಅಧಿಕಾರ ತ್ಯಾಗದ ಚರ್ಚೆಗೆ ಗ್ರಾಸವಾಗಿದೆ.

Read More
Next Story