
ವಿಧಾನಸೌಧದಲ್ಲಿ ನಡೆಯುತ್ತಿರುವ ಇಂದಿನ ಸಭೆಯಲ್ಲಿ ಪ್ರಮುಖವಾಗಿ ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಎರಡು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ.
ಅರಸು ದಾಖಲೆ ಮುರಿದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಸಂಪುಟ ಸಭೆ ಇಂದು
ವಿಧಾನಸೌಧದಲ್ಲಿ ನಡೆಯುತ್ತಿರುವ ಇಂದಿನ ಸಭೆಯಲ್ಲಿ ಪ್ರಮುಖವಾಗಿ ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಎರಡು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದಿವಂಗತ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿದ್ದ ಸುದೀರ್ಘ ಅವಧಿಯ ಆಡಳಿತದ ದಾಖಲೆಯನ್ನು ಅಳಿಸಿ ಹಾಕಿ, ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ದಾಖಲೆ ನಿರ್ಮಿಸಿದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ಹಲವು ಜನಪರ ಯೋಜನೆಗಳಿಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಇಂದಿನ ಸಭೆಯಲ್ಲಿ ಪ್ರಮುಖವಾಗಿ ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಎರಡು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
'ಬಿ' ಖಾತಾ ಆಸ್ತಿ ಮಾಲೀಕರಿಗೆ 'ಎ' ಖಾತಾ ಭಾಗ್ಯ?
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಪ್ರಾಧಿಕಾರಗಳ ಅನುಮೋದನೆ ಪಡೆಯದೆ ಅಥವಾ ಭೂ ಪರಿವರ್ತನೆ ಮಾಡಿಸದೆ ನಿರ್ಮಿಸಲಾದ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡ ಮತ್ತು ಪ್ಲಾಟ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.
ಪ್ರಸ್ತುತ ಇಂತಹ ಆಸ್ತಿಗಳಿಗೆ 'ಬಿ' ಖಾತಾ ನೀಡಲಾಗುತ್ತಿದೆ. ಇದನ್ನು ಸಕ್ರಮಗೊಳಿಸಿ ಅಥವಾ ನಿಯಮಗಳಲ್ಲಿ ಮಾರ್ಪಾಡು ಮಾಡಿ 'ಎ' ಖಾತಾ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು, ಅಂತಿಮ ಅನುಮೋದನೆ ದೊರೆತರೆ ಲಕ್ಷಾಂತರ ಆಸ್ತಿ ಮಾಲೀಕರಿಗೆ, ವಿಶೇಷವಾಗಿ ಬೆಂಗಳೂರು ಮತ್ತು ಪ್ರಮುಖ ನಗರಗಳಲ್ಲಿನ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಲಕ್ಷಾಂತರ ಮನೆ ಕೆಲಸದವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. 'ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ದೆ'ಯನ್ನು ಜಾರಿಗೊಳಿಸುವ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಮನೆ ಕೆಲಸದವರನ್ನು ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಇತರೆ ಕಾರ್ಮಿಕರಂತೆಯೇ ಸಾಮಾಜಿಕ ಭದ್ರತೆ, ವೇತನ ಭದ್ರತೆ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ.

