
ಸಿಎಂ ಬದಲಾವಣೆ ಚರ್ಚೆ| ಡಿಕೆಶಿ ನಿಗೂಢ ನಡೆ; ಶಾಸಕರ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ
ಸಿಎಂ ಬದಲಾವಣೆ ಕುರಿತಾದ 'ನವೆಂಬರ್ ಕ್ರಾಂತಿ'ಗೆ ಚೆಕ್ ಮೇಟ್ ನೀಡಲು ಸಿದ್ದರಾಮಯ್ಯ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತ ಹೇಳಿಕೆಗಳು ಮುನ್ನಲೆಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ತಾವೇ ಐದು ವರ್ಷ ಪೂರ್ತಿ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಆದರೂ ತಮ್ಮ ಬೆಂಬಲಕ್ಕಿರುವ ಶಾಸಕರ ಸಂಖ್ಯೆಯ ಬಗ್ಗೆ ಹೈಕಮಾಂಡ್ ಮುಂದೆ ಪರೋಕ್ಷವಾಗಿ ಪ್ರದರ್ಶಿಸಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಾರ್ಯಕ್ಕೂ ಮುಂದಾಗಿದ್ದಾರೆ.
ಸಿಎಂ ಬದಲಾವಣೆ ಕುರಿತಾದ 'ನವೆಂಬರ್ ಕ್ರಾಂತಿ' (ಮುಖ್ಯಮಂತ್ರಿ ಬದಲಾವಣೆ) ಚರ್ಚೆಗೆ ವಿರಾಮ ನೀಡಲು ಸಿದ್ದರಾಮಯ್ಯ ರಾಜಕೀಯ ಚದುರಂಗದಾಟ ಆರಂಭಿಸಿದ್ದಾರೆ. ಅದರ ಮೊದಲ ಭಾಗವೇ "ನಾನೇ ಐದು ವರ್ಷ ಸಿಎಂʼ ಎಂದು ಹೇಳಿಕೊಳ್ಳುವುದು. ಎರಡನೇ ಭಾಗವಾಗಿ ಶಾಸಕರ ಬಲಾಬಲ ಪ್ರದರ್ಶನದ ತಂತ್ರಗಾರಿಕೆ ರೂಪಿಸುವುದು. ನವೆಂಬರ್ವರೆಗೂ ಕಾಯದೆ ಆದಷ್ಟು ಬೇಗ ಹೈಕಮಾಂಡ್ ಎದುರು ಶಾಸಕರ ಬಲ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ನಿಗೂಢ ನಡೆ?
ʼಐದು ವರ್ಷ ನಾನೇ ಸಿಎಂʼ ಎಂದು ಬಹಿರಂಗ ಹೇಳಿಕೆ ನೀಡಿದರೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಸಮಾಧಾನ ಹೊರ ಹಾಕದೇ 'ನನ್ನ ಮುಂದೆ ಬೇರೆ ಆಯ್ಕೆಗಳಿಲ್ಲ. ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇನೆ' ಎಂದು ಹೇಳಿರುವುದು ಡಿ.ಕೆ.ಶಿವಕುಮಾರ್ ನಿಗೂಢ ಕಾರ್ಯಸೂಚಿ ಇರಬಹುದು ಎಂಬ ಆತಂಕವೂ ಸಿಎಂ ಸಿದ್ದರಾಮಯ್ಯ ಹಾಗೂ ಅವ ಬೆಂಬಲಿಗರಲ್ಲಿದ್ದು, ತ್ವರಿತವಾಗಿ ಶಾಸಕರ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಅಷ್ಟು ಸಲೀಸಾಗಿ ಮಾಧ್ಯಮಗಳ ಎದುರು ಹೇಳಿಕೆ ಕೊಟ್ಟರೂ ಡಿಸೆಂಬರ್ ನಲ್ಲಿ ಸಿಎಂ ಸ್ಥಾನ ಬದಲಾವಣೆ ಖಚಿತ ಎಂದು ಡಿಕೆಶಿ ಬೆಂಬಲಿಗ ಶಾಸಕರು ಹೇಳುತ್ತಿದ್ದಾರೆ. ಈ ಮಧ್ಯೆ ಹೈಕಮಾಂಡ್ ಕೂಡ ತನ್ನದೇ ನಿರ್ಧಾರವೇ ಅಂತಿಮ ಎಂದು ಹೇಳಿರುವ ಹಿನ್ನೆಲೆಯಲ್ಲಿ ಶಾಸಕರ ಬಲಾಬಲ ಪ್ರದರ್ಶನ, ಬೆಂಬಲ ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಈಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದ್ದರು. ಹಾಗಾಗಿಯೇ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಶಾಸಕರ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರ ಅಭಿಪ್ರಾಯ ಕೇಳುವ ರಣತಂತ್ರ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮಟ್ಟದಲ್ಲಿ ತೆರೆಮರೆಯ ಲಾಬಿ ಆರಂಭಿಸಿರುವುದು ಹಾಗೂ ಸಿಎಂ ಬದಲಾವಣೆ ವಿಚಾರದಲ್ಲಿ ವಿವಾದ ಸೃಷ್ಟಿಸಿ ಈಗ ತಟಸ್ಥರಾಗಿರುವುದು ಸಿದ್ದರಾಮಯ್ಯ ಬೆಂಬಲಿಗರ ಅನುಮಾನಕ್ಕೆ ಕಾರಣವಾಗಿದೆ.
ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರನ್ನು ಮೀರಿ ಏನಾದರೂ ತೀರ್ಮಾನ ಮಾಡುವ ಆತಂಕವೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಬೆಂಬಲದ ದಾಳ ಉರುಳಿಸಲು ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ. ಸಿಎಂ ಬದಲಾವಣೆ ವಿಚಾರದಲ್ಲಿ ಏನೇ ತೀರ್ಮಾನ ಕೈಗೊಂಡರೂ ಶಾಸಕರ ಅಭಿಪ್ರಾಯ ಪಡೆಯಲೇಬೇಕು ಎಂಬ ಸಂದೇಶ ರವಾನಿಸುವುದು ಕೂಡ ಈ ತಂತ್ರದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರ ಅಭಿಪ್ರಾಯ ಮೀರಿ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಬಾರದು. ಒಂದು ವೇಳೆ ಶಾಸಕರ ಅಭಿಪ್ರಾಯ ಪಡೆಯದೆ ತೀರ್ಮಾನ ಮಾಡಿದರೆ ಮುಂದಿನ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ ಎನ್ನುವ ಸಂದೇಶ ರವಾನಿಸಲೂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ತೀರ್ಮಾನಿಸಿದ್ದಾರೆ.
ಸಿಎಂ ಸ್ಥಾನದ ವಿಚಾರದಲ್ಲಿ ಸಹಜವಾಗಿಯೇ ಸಿದ್ದರಾಮಯ್ಯ ಪರ ಹೆಚ್ಚು ಬೆಂಬಲವಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಅಷ್ಟೇನೂ ಇಲ್ಲ. ಇದು ಹೈಕಮಾಂಡ್ ನಾಯಕರಿಗೂ ಗೊತ್ತಿರುವ ವಿಚಾರ. ಹಾಗಾಗಿ ಶಾಸಕರ ಶಕ್ತಿ ಪ್ರದರ್ಶನವೇ ಉತ್ತಮ ಆಯ್ಕೆ ಎಂಬುದನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಅವರು ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಕೆಶಿ - ಸುರ್ಜೇವಾಲ ಆತ್ಮೀಯತೆ ಸಿದ್ದರಾಮಯ್ಯ ಆತಂಕಕ್ಕೆ ಕಾರಣ?
ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಡಿ.ಕೆ.ಶಿವಕುಮಾರ್ ಜತೆಗೆ ಆತ್ಮೀಯವಾಗಿರುವುದು ಸಿದ್ದರಾಮಯ್ಯ ಬಣದಲ್ಲಿ ಅಸಮಾಧಾನ ಮೂಡಿಸಿದೆ.
ಈ ಹಿಂದೆ ಕೂಡ ಸಿದ್ದರಾಮಯ್ಯ ಪರ ನಾಯಕರ ಬಹಿರಂಗ ಹೇಳಿಕೆ, ಔತಣಕೂಟ ಆಯೋಜನೆಗೆ ಸುರ್ಜೇವಾಲಾ ಬ್ರೇಕ್ ಹಾಕಿದ್ದರು. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಡಿ.ಕೆ.ಶಿವಕುಮಾರ್ ಆಣತಿಯಂತೆ ನಡೆಯುತ್ತಿದ್ದು, ಉಸ್ತುವಾರಿ ಬದಲಾಯಿಸಲು ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಸಿಎಂ ಪರ ನಾಯಕರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.
ಆದರೆ, ಹನಿಟ್ರ್ಯಾಪ್ ಪ್ರಕರಣದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ವಿಧಾನಸಭೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರಿಂದ ಹೈಕಮಾಂಡ್ ಅಸಮಾಧಾನಗೊಂಡಿತ್ತು.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಹೈಕಮಾಂಡ್ ನಾಯಕರಿಗೂ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾರೆ ಎಂಬ ರಾಜಣ್ಣ ಹೇಳಿಕೆಯಿಂದ ತೀವ್ರ ಮುಜುಗರ ಎದುರಾಗಿತ್ತು. ಅಂದಿನಿಂದ ಕೆಲ ದಿನಗಳವರೆಗೆ ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೂಟ ತಟಸ್ಥ ನೀತಿ ಅನುಸರಿಸಿತ್ತು.
ಯಾರೂ ನನ್ನ ಪರ ಮಾತನಾಡೋದು ಬೇಡ ಎಂದ ಡಿಕೆಶಿ
ಸಿಎಂ ಸಿದ್ದರಾಮಯ್ಯ ಬಣದ ರಣತಂತ್ರ ತಿಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಯಾವ ಶಾಸಕರೂ ನನ್ನ ಪರ ಮಾತನಾಡುವುದು ಬೇಡ ಎಂದು ಬೇಸರ ಹೊರಹಾಕಿರುವುದು ಸಿಎಂ ಬಣದ ಒತ್ತಡ ತಂತ್ರಕ್ಕೆ ಪುಷ್ಠಿ ನೀಡುವಂತಿದೆ. ಅಲ್ಲದೇ ಸಿಎಂ ಬದಲಾವಣೆ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡಿದ್ದು ಕೂಡ ಡಿಕೆಶಿ ಮಾಸ್ಟರ್ ಪ್ಲಾನ್ ಇರಬಹುದು ಎಂದು ವಿಶ್ಲೇಷಿಸಲಾಗಿದೆ.