ಸರ್ಕಾರಿ ನೌಕರರಾಗಿ ಅಂಗನವಾಡಿ ಕಾರ್ಯಕರ್ತೆಯರ ಪರಿಗಣನೆ: ಸಂಪುಟದಲ್ಲಿ ಚರ್ಚೆಗೆ ಸಿಎಂ ಭರವಸೆ
ಅಂಗನವಾಡಿ ಕಾರ್ಯಕರ್ತೆಯರಿಗೆ 25,000 ಮತ್ತು ಸಹಾಯಕರಿಯರಿಗೆ ರೂ. 12,000 ವೇತನ ನೀಡಬೇಕು ಎಂಬ ಬೇಡಿಕೆ ಬಗ್ಗೆಯೂ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಗ್ರೇಡ್ 3 (ಸಿ ದರ್ಜೆ )ಮತ್ತು ಗ್ರೇಡ್ 4 (ಡಿ ದರ್ಜೆ) ನೌಕರರೆಂದು ಗುಜರಾತ್ ಹೈಕೋರ್ಟ್ ಆದೇಶದಂತೆ ಕರ್ನಾಟಕದಲ್ಲೂ ಸರ್ಕಾರಿ ನೌಕರರೆಂದು ಎಂದು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಪರಿಗಣಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಪದಾಧಿಕಾರಿಗಳು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದರು.
ಜತೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ 25,000 ಮತ್ತು ಸಹಾಯಕರಿಯರಿಗೆ ರೂ. 12,000 ವೇತನ ನೀಡಬೇಕು ಎಂಬ ಬೇಡಿಕೆ ಬಗ್ಗೆಯೂ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಸಿಎಂ ಹೇಳಿದ್ದಾರೆ. ನಿಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷೆ ಬಿ. ಪ್ರೇಮ, ಗೌರಾವಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್. ರಾಜ್ಯ ಕಾರ್ಯದರ್ಶಿ ಉಷಾಮಣಿ, ರಾಜ್ಯ ಖಜಾಂಚಿ ವಿಶಾಲಾಕ್ಷಿ, ಇತರ ಪದಾಧಿಕಾರಿಗಳಾದ ನಿರ್ಮಲ ಬಿ.ಎಸ್., ಶಾಂತಾ, ಭಾರತಿ ಎನ್.ಪಿ. ಭಾಗಿಯಾಗಿದ್ದರು.
ಅಂಗನವಾಡಿ ಕಾರ್ಯಕರ್ತರ ಆಗ್ರಹ
ಮೂರರಿಂದ ಆರು ವರ್ಷದವರೆಗಿನ ಕಂದಮ್ಮಗಳ ಪೋಷಣೆ, ಬಾಣಂತಿ ಹಾಗೂ ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಯೋಗಕ್ಷೇಮವನ್ನೇ ಸರ್ಕಾರ ಮರೆತಿದೆ ಎಂಬುದು ಅಂಗನವಾಡಿ ಕಾರ್ಯಕರ್ತರ ಅಳಲು.
ಸಮಗ್ರ ಶಿಶು ಅಭಿವೃದ್ಧಿ ಸೇವೆಯ (ICDS) ಪರಿಣಾಮಕಾರಿ ಜಾರಿಯ ಜೊತೆಗೆ ಸರ್ಕಾರದ ಕಾರ್ಯಕ್ರಮ ಅನುಷ್ಠಾನ, ವಿವಿಧ ಸಮೀಕ್ಷೆಗಳಲ್ಲಿ ತೊಡಗಿಸಿಕೊಂಡರೂ ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಅಧಿಕ ಕಾರ್ಯದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾದರೂ ಅಂಗನವಾಡಿ ಕಾಯಕರ್ತೆಯರ ಯೋಗಕ್ಷೇಮ ಕೇಳುತ್ತಿಲ್ಲ. ಮಕ್ಕಳು ಹಾಗೂ ಗರ್ಭಿಣಿ-ಬಾಣಂತಿಯರ ಪೋಷಣೆಯ ಜವಾಬ್ದಾರಿ ಹೊತ್ತಿರುವ ಕಾರ್ಯಕರ್ತೆಯರು ಸರ್ಕಾರ ನೀಡುವ ನೆರವು ಸಾಕಾಗದೇ ತಮ್ಮ ಒಡವೆಗಳನ್ನೇ ಅಡವಿಟ್ಟು ಆರೈಕೆಯ ವೆಚ್ಚ ಭರಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ ಎಂಬುದು ಅವರ ಅಳಲಾಗಿದೆ.
ರಾಜ್ಯ ಸರ್ಕಾರ ಮೂರು ವರ್ಷದ ಹಿಂದೆ ಕೆಪಿಎಸ್ಸಿ ಮೂಲಕ ಮೇಲ್ವಿಚಾರಕರ ಹುದ್ದೆಗೆ ಭರ್ತಿ ಮಾಡಿದೆ. ಆದರೆ, ಸಾಕಷ್ಟು ವರ್ಷಗಳ ಕಾಲ ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ಕೊಟ್ಟಿಲ್ಲ. ಅಂಗನವಾಡಿ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿದರೂ ಇದುವರೆಗೆ ಬೇಡಿಕೆ ಈಡೇರಿಲ್ಲ. ಪ್ರಸ್ತುತ 20 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 11,500 ರೂ. ವೇತನ ಸಿಗುತ್ತಿದೆ. 20 ವರ್ಷಕ್ಕಿಂತ ಕಡಿಮೆ ಸೇವಾವಧಿ ಹಾಗೂ ಹೊಸಬರಿಗೆ 10,500 ರೂ. ನೀಡಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಬಿಎಲ್ಒ, ಮಾತೃವಂದನಾ, ಭಾಗ್ಯಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಮೀಕ್ಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಒತ್ತಡ ಅಧಿಕವಾಗಿದೆ.
2023 ರಿಂದ ಗ್ರಾಚ್ಯುಯಿಟಿ ಇಲ್ಲ
ರಾಜ್ಯದಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ 2023 ರಿಂದ ಗ್ರಾಚ್ಯುಯಿಟಿ ನೀಡಿಲ್ಲ. ಸೇವಾವಧಿಯಲ್ಲಿ ಕಡಿಮೆ ವೇತನ ಪಡೆಯುತ್ತಿದ್ದ ನೌಕರರಿಗೆ ಗ್ರಾಚ್ಯುಯಿಟಿಯೇ ಜೀವನಾಧಾರವಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಗ್ರಾಚ್ಯುಯಿಟಿ ನೀಡಬೇಕು ಎಂದು ಅಂಗನವಾಡಿ ಕಾಯಕರ್ತೆಯರು ಒತ್ತಾಯಿಸಿದ್ದಾರೆ.
ಇತರ ಬೇಡಿಕೆಗಳು
- ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಎಲ್ ಕೆಜಿ ಮತ್ತು ಯುಕೆಜಿ ಆಗಿ ಮೇಲ್ದರ್ಜೆಗೇರಿಸಬೇಕು.
- ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಪಿಂಚಣಿ ರೂ.10,000 ರೂ. ನೀಡಬೇಕು.
- ಗ್ರಾಚ್ಯುಯಿಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ನೌಕರರಿಗೆ ಗ್ರಾಚ್ಯುಯಿಟಿ ಒದಗಿಸಬೇಕು.