ಎಸ್‌ಪಿಯಿಂದ ಡಿಜಿಪಿವರೆಗೆ ಠಾಣೆ ಪರಿಶೀಲನೆ | ನಾಳೆಯಿಂದಲೇ ಕಡ್ಡಾಯ: ಸಿದ್ದರಾಮಯ್ಯ ಸೂಚನೆ
x

ಎಸ್‌ಪಿಯಿಂದ ಡಿಜಿಪಿವರೆಗೆ ಠಾಣೆ ಪರಿಶೀಲನೆ | ನಾಳೆಯಿಂದಲೇ ಕಡ್ಡಾಯ: ಸಿದ್ದರಾಮಯ್ಯ ಸೂಚನೆ

ಪೊಲೀಸರಿಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಹೇಳಿದರು. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ತಕ್ಷಣದಿಂದ ಎಲ್ಲಾ ಡಿಜಿಪಿಗಳಿಂದ ಹಿಡಿದು ಎಸ್‌ಪಿ/ಡಿಸಿಪಿವರೆಗೆ (ಪೊಲೀಸ್‌ ಮಹಾ ನಿರ್ದೇಶಕರಿಂದ ಹಿಡಿದು ಪೊಲೀಸ್‌ ಅಧೀಕ್ಷಕರು ಮತ್ತು ಉಪ ಪೊಲೀಸ್‌ ಆಯುಕ್ತರವರೆಗೆ ) ಎಲ್ಲಾ ಹಿರಿಯ ಅಧಿಕಾರಿಗಳು ಪೊಲೀಸ್‌ ಮ್ಯಾನ್ಯುಯಲ್‌ನಲ್ಲಿ ನಮೂದಿಸಿರುವಂತೆ ಅವರ ವ್ಯಾಪ್ತಿಯ ಪ್ರತಿ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್‌ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, "ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ ಎಸ್‌ಪಿ ಮತ್ತು‌ ಐಜಿಪಿ ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಪಿ-ಐಜಿಪಿಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಸೂಚನೆ ನೀಡಿದರು. "ನಾಳೆಯಿಂದಲೇ ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು," ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ

ಫೇಕ್ ನ್ಯೂಸ್ ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ ಫ್ಯಾಕ್ಟ್‌ ಚೆಕ್‌ ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್ ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ . ಕೃತಕ ಬುದ್ದಿಮತ್ತೆ ಬಳಸಿ. ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ನಾಚಿಕೆಗೇಡು!

ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು? ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಪೊಲೀಸ್‌ ಠಾಣಾಧಿಕಾರಿಗಳಿಗೆ ಗೊತ್ತಿರತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ‌ ಎಂದು ಪ್ರಶ್ನಿಸಿದ ಅವರು, ನಿಮಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಹೇಳಿದರು. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗೃಹ ಸಚಿವರಿಗೆ, ಕರ್ನಾಟಕ‌ ಪೊಲೀಸ್ ಗೆ ಅಭಿನಂಧಿಸಿದ ಸಿಎಂ

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್ ಗೆ ಮುಖ್ಯಮಂತ್ರಿಗಳು ಅಭಿನಂಧಿಸಿದರು.‌

ತಪ್ಪುಗಳನ್ನು ಸರಿಮಾಡಿಕೊಂಡು ಗುಣಾತ್ಮಕ ಪೊಲೀಸ್ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ದೇಶದಲ್ಲಿ ಕರ್ನಾಟಕ‌ ಪೊಲೀಸ್ ಗೆ ಇರುವ ಉನ್ನತ ಹೆಸರನ್ನು ಉಳಿಸಿ-ಬೆಳೆಸಬೇಕು; ಸಮಾಜದಲ್ಲಿ ಎಲ್ಲರೂ ನಿಶ್ಚಿಂತೆಯಿಂದ, ಭಯ ಮುಕ್ತವಾಗಿ ವಾಸಿಸುವ ವಾತಾವರಣ ಇರಬೇಕು ಎಂದರು. "ಕಾನೂನು ಸುವ್ಯವಸ್ಥೆ ಸುರಕ್ಷಿತವಾಗಿದ್ದರೆ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯ. ಇವೆಲ್ಲದರಿಂದ ತಲಾ ಆದಾಯ, ಜಿಡಿಪಿ ಬೆಳವಣಿಗೆ ಆಗ್ತದೆ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆಯಿಂದ ಕೂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ನಿಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಕೆಳಗಿನ‌ಅಧಿಕಾರಿಗಳು‌ ಇನ್ನಷ್ಡು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ," ಎಂದು ಸಿದ್ದರಾಮಯ್ಯ ಹೇಳಿದರು.

Read More
Next Story