
Bangalore | ಮುಂಬರುವ ದಿನಗಳಲ್ಲಿ 9000 ಶುಚಿತ್ವ ಕಾರ್ಮಿಕರ ಕಾಯಂ; ಸಿಎಂ ಭರವಸೆ
ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಮಾತನಾಡಿದ ಸಿಎಂ ಉಳಿದವರನ್ನೂ ಕಾಯಂ ಮಾಡುವುದಾಗಿ ಪ್ರಕಟಿಸಿದ್ದಾರೆ.
ಪ್ರಸ್ತುತ ಕಾಯಂಗೊಂಡಿರುವ ಪೌರಕಾರ್ಮಿಕರ ಜೊತೆಗೆ ಮುಂದಿನ ದಿನಗಳಲ್ಲಿ ಸುಮಾರು 9000ಮಂದಿ ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್‌ಗಳನ್ನು ಒಳಗೊಂಡ ಶುಚಿತ್ವ ಕಾರ್ಮಿಕರನ್ನು ಕಾಯಂ ಮಾಡಲಾಗುವುದು. ಶುಚಿತ್ವದ ಕಾಯಕಕ್ಕೆ ಸಮರ್ಪಿಸಿಕೊಂಡವರ ಕಾಯಂ ನೇಮಕಾತಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಬಿಬಿಎಂಪಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದ ಬಳಿಕ ಮಾತನಾಡಿದರು.
ಮಧ್ಯವರ್ತಿಗಳ ಹಾವಳಿಯಿಂದ ಮುಕ್ತ
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದರು. ನ್ಯಾಯಯುತ ಸಂಬಳ ಕೊಡುತ್ತಿರಲಿಲ್ಲ. ಪೌರಕಾರ್ಮಿಕರ ಸಹಾಯಕ್ಕಾಗಿ ಕನಿಷ್ಠ ವೇತನ ಕಾಯ್ದೆ ಪ್ರಕಾರ ದೊರೆಯಬೇಕಾದ ಕನಿಷ್ಠ ಸಂಬಳ ನೀಡುವ ವ್ಯವಸ್ಥೆ ಮಾಡಲಾಯಿತು. ಮೊದಲು 7000 ರೂ. ದೊರೆಯುತ್ತಿದ್ದ ವೇತನವನ್ನು 17000 ಕ್ಕೆ ಹೆಚ್ಚಿಸಿ, ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಯಾಗುವ ವ್ಯವಸ್ಥೆ ಮಾಡಲಾಯಿತು. ಈ ರೀತಿ ಪೌರಕಾರ್ಮಿಕರಿಗೆ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಲಾಯಿತು ಎಂದರು.
ಪೌರಕಾರ್ಮಿಕರ ಬೇಡಿಕೆ ಈಡೇರಿಸಿದ್ದು ಕಾಂಗ್ರೆಸ್
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಕಾಯಂ ನೇಮಕಾತಿಯನ್ನು ಬೆಂಬಲಿಸಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪೌರ ಕಾರ್ಮಿಕರ ನೇಮಕ ಕಾಯಂಗೊಳಿಸುವ ಭರವಸೆ ನೀಡಲಾಗಿತ್ತು. ಅದು ಇಂದು ಈಡೇರಿದೆ. ಇದರಿಂದ 4ನೇ ದರ್ಜೆಯ ಪೌರಕಾರ್ಮಿಕರ ವೇತನ ನೇರವಾಗಿ ಅವರ ಖಾತೆಗೆ 39,000 ರೂ.ಗಳು ಪಾವತಿಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಲಿ
1000 ಪೌರಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು , ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು, ತನ್ಮೂಲಕ ಸಮಸಮಾಜವನ್ನು ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ದೊರೆಯುವಂತಾಗಬೇಕು. ಪೌರಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು. ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಬೇಕು. ಸಾರ್ವಜನಿಕರೂ ತಮ್ಮ ಪರಿಸರದ ಸ್ವಚ್ಛತೆ ಬಗ್ಗೆ ಸ್ವಯಂಪ್ರೇರಣೆಯಿಂದ ಗಮನ ಹರಿಸಬೇಕು ಎಂದು ತಿಳಿಸಿದರು.