CM Siddaramaiah announced a compensation of ₹10 lakh each for the families of the deceased from Karnataka
x

ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ರರ ದಾಳಿಯಲ್ಲಿ ಮೃತಪಟ್ಟ ರಾಜ್ಯದ ಇಬ್ಬರಿಗೆ ಪರಿಹಾರ ಘೋಷಿಸಿದರು.

Pahalgam Terror Attack| ಕರ್ನಾಟಕದ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಉಗ್ರರ ದಾಳಿಯಲ್ಲಿ ಒಟ್ಟು 26 ಜನ ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್​ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಭರತ್ ಭೂಷಣ್ ಮೃತಪಟ್ಟವರು.


ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ (ಏಪ್ರಿಲ್ 22) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಇಬ್ಬರ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ತಲಾ 10 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಈ ಘೋಷಣೆಯನ್ನು ಮಾಡಿದ್ದು, ಅದಕ್ಕಿಂತ ಮೊದಲು ಅವರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರವೂ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣ ಗಾಯಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಉಗ್ರರ ದಾಳಿಯಲ್ಲಿ ಒಟ್ಟು 26 ಜನ ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್​ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಭರತ್ ಭೂಷಣ್ ಮೃತಪಟ್ಟವರು. ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆಗಾರಿಕೆ ಹೊತ್ತಿದೆ. ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಳಿಯ ಸುದ್ದಿ ತಿಳಿದ ತಕ್ಷಣ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಸ್ಥಿತಿಗತಿಯನ್ನು ಪರಿಶೀಲಿಸಿದ್ದರು. ಕಾಶ್ಮೀರದಲ್ಲಿ ಸಿಲುಕಿರುವ 40ಕ್ಕೂ ಹೆಚ್ಚು ಕನ್ನಡಿಗ ಪ್ರವಾಸಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಶಿವಮೊಗ್ಗದ ಮಂಜುನಾಥ್ ರಾವ್ ಅವರ ಕುಟುಂಬಕ್ಕೆ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತರಿಬ್ಬರ ಕಳೇಬರವನ್ನು ಗೌರವಯುತವಾಗಿ ಕರ್ನಾಟಕಕ್ಕೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ವೈಫಲ್ಯದ ಆರೋಪ

ಸಿದ್ದರಾಮಯ್ಯ ಅವರು ಈ ದಾಳಿಯನ್ನು ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯ ಎಂದು ಟೀಕಿಸಿದ್ದಾರೆ. “ಇದೊಂದು ಯೋಜಿತ ದಾಳಿಯಾಗಿದ್ದು, ಕೇಂದ್ರ ಸರ್ಕಾರದ ಗುಪ್ತಚರ ಸಂಗ್ರಹಣೆಯ ವೈಫಲ್ಯವನ್ನು ತೋರಿಸುತ್ತದೆ,” ಎಂದು ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.

ತನಿಖೆ ಶುರು

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡವು ದಾಳಿಯ ಸ್ಥಳಕ್ಕೆ ಭೇಟಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ತನಿಖೆ ನಡೆಸುತ್ತಿದೆ. ಭಾರತೀಯ ಸೇನೆ ಮತ್ತು ಸಿಆರ್​​ಪಿಎಫ್​ ದಟ್ಟ ಕಾಡುಗಳಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ.

Read More
Next Story