
77ನೇ ಗಣರಾಜ್ಯೋತ್ಸವದ ಅಂಗವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ
ಗ್ಯಾರಂಟಿಗಳು ಕೇವಲ ಭರವಸೆಯಲ್ಲ, ಅವು ಸಂವಿಧಾನಬದ್ಧ ಹಕ್ಕು: ಸಿಎಂ ಸಿದ್ದರಾಮಯ್ಯ
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಅದನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಜಾಗೃತರಾಗಿರುವಂತೆ ಸಿಎಂ ಸಿದ್ಧರಾಮಯ್ಯ ಕರೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಲ್ಲ, ಅವು ಸಂವಿಧಾನದ ಪರಿಚ್ಛೇದ 39 ಮತ್ತು 47ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ನೀಡಲಾದ 'ಬದುಕುವ ಹಕ್ಕಿನ' ನೈಜ ಅನುಷ್ಠಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳು ಮತ್ತು ಸರ್ಕಾರದ ಜನಪರ ಯೋಜನೆಗಳ ಕುರಿತು ತಮ್ಮ ಆಶಯವನ್ನು ಹಂಚಿಕೊಂಡಿದ್ದಾರೆ.
'ಸಾರ್ವತ್ರಿಕ ಮೂಲ ಆದಾಯ' ಪರಿಕಲ್ಪನೆಯನ್ನು ರಾಜ್ಯದಲ್ಲಿ ಗ್ಯಾರಂಟಿಗಳ ಮೂಲಕ ಜಾರಿಗೆ ತರಲಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳು ಜನರ ಕೈಗೆ ನೇರವಾಗಿ ಆರ್ಥಿಕ ಶಕ್ತಿ ತುಂಬುತ್ತಿವೆ. ಇಂದು ರಾಜ್ಯದ ಬಡ ಕುಟುಂಬಗಳು ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿಗಳವರೆಗೆ ಉಳಿತಾಯ ಮಾಡುತ್ತಿವೆ. ಅದೇ ರೀತಿ ಮಧ್ಯಮ ವರ್ಗದ ಕುಟುಂಬಗಳು ವಾರ್ಷಿಕವಾಗಿ 25 ರಿಂದ 30 ಸಾವಿರ ರೂಪಾಯಿಗಳಷ್ಟು ಹಣವನ್ನು ಉಳಿಸುತ್ತಿದ್ದು, ಈ ಮೊತ್ತವು ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣದಂತಹ ಸುಸ್ಥಿರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಆರ್ಥಿಕ ಪ್ರಜಾಪ್ರಭುತ್ವವೇ ದೇಶದ ಶಕ್ತಿ
ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ದೇಶ ಸದೃಢವಾಗುವುದಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಆರ್ಥಿಕ ಪ್ರಜಾಪ್ರಭುತ್ವ ಸಾಧಿಸುವುದು ಅತಿ ಮುಖ್ಯವಾಗಿದೆ. ಸಾವಿರಾರು ಜಾತಿಗಳಾಗಿ ಒಡೆದಿರುವ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆ ತಂದಾಗ ಮಾತ್ರ ದೇಶ ಆಂತರಿಕವಾಗಿ ಬಲಗೊಳ್ಳಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮತ್ತು ಅದನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಜಾಗೃತರಾಗಿರುವಂತೆ ಕರೆ ನೀಡಿದ್ದಾರೆ. ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಪೂರ್ಣಗೊಂಡಿರುವ ಈ ದಿನವನ್ನು ಪ್ರಜಾಪ್ರಭುತ್ವದ ಮರುಚಿಂತನೆಯ ದಿನವಾಗಿ ಆಚರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅನುಭವ ಮಂಟಪವೇ ಪ್ರಜಾಪ್ರಭುತ್ವದ ಅಡಿಗಲ್ಲು
ರಾಜ್ಯದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಹೊಸದಲ್ಲ, 800 ವರ್ಷಗಳ ಹಿಂದೆಯೇ ಬಸವಣ್ಣನವರ ನೇತೃತ್ವದ ಶರಣ ಚಳವಳಿಯಲ್ಲಿ ಇದರ ಬೀಜಾಂಕುರವಾಗಿತ್ತು. ಕೂಡಲ ಸಂಗಮದ 'ಅನುಭವ ಮಂಟಪ'ವು ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನವಾಗಿ ಚರ್ಚಿಸುವ ಅವಕಾಶ ನೀಡುವ ಮೂಲಕ ಇಂದಿನ ವ್ಯವಸ್ಥೆಗೆ ಅಡಿಪಾಯ ಹಾಕಿಕೊಟ್ಟಿದೆ ಎಂದು ಅವರು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಲಿಖಿತ ಸಂವಿಧಾನ ನೀಡುವ ಮೊದಲು ಭಾರತದಲ್ಲಿ ಅಸಮಾನತೆಯ ಅಲಿಖಿತ ಸಂವಿಧಾನ ಜಾರಿಯಲ್ಲಿತ್ತು. ಅದು ಜನ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಶೂದ್ರರು, ಮಹಿಳೆಯರು ಮತ್ತು ಅಸ್ಪೃಶ್ಯರನ್ನು ಜ್ಞಾನ ಹಾಗೂ ಸಂಪತ್ತಿನ ಹಕ್ಕಿನಿಂದ ವಂಚಿಸಿತ್ತು. ಈ ಮನುಷ್ಯ ವಿರೋಧಿ ಪದ್ಧತಿಯನ್ನು ಸಂವಿಧಾನದ ಮೂಲಕ ತೊಡೆದುಹಾಕಿ, ಸಾಮಾಜಿಕ ಮರುರಚನೆಗೆ ಅಂಬೇಡ್ಕರ್ ಅವರು ನಾಂದಿ ಹಾಡಿದರು ಎಂದು ಅವರು ತಿಳಿಸಿದರು.
ಸಂವಿಧಾನವನ್ನು ಬಹಿರಂಗವಾಗಿ ವಿರೋಧಿಸಲು ಸಾಧ್ಯವಾಗದವರು, ಇಂದು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸುವ 'ನಿಧಾನ ವಿಷ' ನೀಡುವ ಸಂಚು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ಸಂವಿಧಾನ ವಿರೋಧಿಗಳು ಅಂತಿಮವಾಗಿ ಬಡವರ, ದಲಿತರ ಮತ್ತು ರೈತರ ವಿರೋಧಿಗಳೇ ಆಗಿರುತ್ತಾರೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎನ್ನುವ ಸತ್ಯವನ್ನು ಅರಿತು, ಈ ಗಣರಾಜ್ಯೋತ್ಸವದಂದು ಸಂವಿಧಾನದ ರಕ್ಷಣೆಯ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.
ದೇಶವು ನಿಜವಾದ ಅರ್ಥದಲ್ಲಿ ಬಲಗೊಳ್ಳುವುದು ಮತ್ತು ಸದೃಢಗೊಳ್ಳುವುದು ಆರ್ಥಿಕ ಪ್ರಜಾಪ್ರಭುತ್ವದಿಂದ ಮಾತ್ರ ಸಾಧ್ಯ. ಈ ಆಶಯವನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಾಷ್ಟ್ರಕ್ಕೆ ಅರ್ಪಿಸುವ ಸಂದರ್ಭದಲ್ಲಿ ದೇಶದ ಆಡಳಿತಗಾರರಿಗೆ ಎರಡು ಪ್ರಮುಖ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನೆನಪಿಸಿದ್ದರು. ಮೊದಲನೆಯದಾಗಿ, ರಾಜಕೀಯ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಆ ಮೂಲಕ ದೇಶದ ಸಾರ್ವಭೌಮತೆಯನ್ನು ಕಾಪಾಡುವುದು. ಎರಡನೆಯದಾಗಿ, ದೇಶದಲ್ಲಿ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುವುದು. ಈ ಎರಡು ಸ್ತಂಭಗಳ ಮೇಲೆ ಸದೃಢ ಭಾರತದ ಭವಿಷ್ಯ ಅಡಗಿದೆ ಎಂದು ಅವರು ತಿಳಿಸಿದರು.
ಸಾಮಾಜಿಕ ಪುನರ್ ರಚನೆಯ ಅನಿವಾರ್ಯತೆ
ಭಾರತವು ಒಂದು ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದರೆ ಮತ್ತು ಸಮಾಜದಲ್ಲಿನ ಸಂಘರ್ಷಗಳಿಂದ ಹೊರಬರಬೇಕಾದರೆ, ಪುರಾತನ ಕಾಲದ ಶ್ರೇಣಿಕೃತ ವ್ಯವಸ್ಥೆಗಳನ್ನು ತೊಡೆದುಹಾಕಿ ಸಮಾಜದ ಪುನರ್ ರಚನೆ ಮಾಡುವುದು ಅತ್ಯಗತ್ಯವಾಗಿದೆ. ನಾಗರಿಕನೊಬ್ಬನ ಸ್ಥಾನಮಾನ ಆತನ ಹುಟ್ಟು ಅಥವಾ ಸಾಮಾಜಿಕ ಹಿನ್ನೆಲೆಯಿಂದ ನಿರ್ಣಯವಾಗಬಾರದು, ಬದಲಿಗೆ ಆತನ ಸತ್ವ ಮತ್ತು ಸಾಧನೆಗಳ ಮೇಲೆ ಆಧಾರಿತವಾಗಿರಬೇಕು ಎಂಬುದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಇಂತಹ ಸಮಾನತೆಯ ನಾಗರಿಕ ಸಮಾಜದ ನಿರ್ಮಾಣವೇ ನಮ್ಮ ಗುರಿಯಾಗಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆ
ಸಾವಿರಾರು ಜಾತಿಗಳಾಗಿ ಮತ್ತು ಮೇಲು-ಕೀಳು ಎಂಬ ತಾರತಮ್ಯಗಳಿಂದ ಛಿದ್ರವಾಗಿರುವ ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕ ಸಮಾನತೆಯನ್ನು ಸ್ಥಾಪಿಸಿದಾಗ ಮಾತ್ರ ದೇಶವು ಆಂತರಿಕವಾಗಿ ಸದೃಢಗೊಳ್ಳಲು ಸಾಧ್ಯ. ನಾವು ಕೇವಲ ರಾಜಕೀಯ ಪ್ರಜಾತಂತ್ರಕ್ಕೆ ಸೀಮಿತವಾಗದೆ, ಅದನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಪರಿವರ್ತಿಸುವ ನಿರಂತರ ಪ್ರಯತ್ನದಲ್ಲಿರಬೇಕು ಎಂದು ಅಂಬೇಡ್ಕರ್ ಅವರು ಅಂದೇ ಮಾರ್ಗದರ್ಶನ ನೀಡಿದ್ದರು.
ಸಂವಿಧಾನವೇ ನಮ್ಮ ಸರ್ಕಾರದ ದಾರಿದೀಪ ನಮ್ಮ ಸರ್ಕಾರದ ಪ್ರತಿಯೊಂದು ಯೋಚನೆ ಮತ್ತು ಯೋಜನೆಗಳಿಗೆ ಸಂವಿಧಾನವೇ ಮೂಲ ಪ್ರೇರಣೆಯಾಗಿದೆ. ಸಂವಿಧಾನದ ಪ್ರತಿಯೊಂದು ಅಕ್ಷರಕ್ಕೂ ನಾನು, ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಮತ್ತು ಗೌರವ ಸಿಗುವಂತೆ ಮಾಡುವುದೇ ನಮ್ಮ ಆಡಳಿತದ ಪರಮ ಗುರಿಯಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರದ ನೂರಾರು ಯೋಜನೆಗಳ ಹಿಂದೆ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎನ್ನುವ ಒಂದೇ ಸದಾಶಯವಿದೆ. ಹಸಿವು ಮುಕ್ತ, ಭಯ ಮುಕ್ತ ಮತ್ತು ಸಮೃದ್ಧ ಕರ್ನಾಟಕವನ್ನು ಕಟ್ಟುವ ನಮ್ಮ ಪ್ರಯತ್ನಕ್ಕೆ ನಾಡಿನ ಜನತೆ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

