CM Race Issue | ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಸಿಎಂ ಬದಲಾವಣೆ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
"ರಾಜ್ಯದಲ್ಲಿ ದಲಿತ ಸಿಎಂ ಆಗ್ತಾರೆ ಎನ್ನುವ ಪ್ರಶ್ನೆಯೇ ಉದ್ಭವಿಸಲ್ಲ. ಈಗಾಗಲೇ ಸಿದ್ದರಾಮಯ್ಯ ಅವರು ಸಿಎಂ ಆಗಿರುವಾಗ, ಮತ್ತೆ ದಲಿತ ಅಥವಾ ಜನರಲ್ ಸಿಎಂ ಆಗ್ತಾರೆ ಎನ್ನುವ ಚರ್ಚೆ ಅನವಶ್ಯಕ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರು ಕೇಳಿದ ದಲಿತ ಸಿಎಂ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕಾಗಿ 12 ಗಂಟೆ ದುಡಿತಿದ್ದೀನಿ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಪಕ್ಷಕ್ಕಾಗಿ ದುಡಿಯುತ್ತಿರುವ ನನ್ನನ್ನು ಪಕ್ಷ ಗುರುತಿಸಬೇಕು. ಯಾರೋ ಕೆಲಸ ಮಾಡದಿದ್ದವರು ಮುಂದೆ ಬರ್ತಾರೆ. ಕೆಲಸ ಮಾಡೋರು ಪಕ್ಷದಲ್ಲಿ ಹಿಂದುಳಿಯುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಆ ರೀತಿ ಹೇಳಿದೆ ಅಷ್ಟೇ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ" ಎಂದು ಸ್ಪಷ್ಟಪಡಿಸಿದರು.
"ನಾನು ಸಿಎಂ ಸಿದ್ಧರಾಮಯ್ಯ ಜೊತೆ ಸಚಿವನಾಗಿ ಕೆಲಸ ಮಾಡುತ್ತೇನೆ. ವಿಪಕ್ಷ ನಾಯಕರು ಕೂಡ ನನ್ನ ಮೇಲಿನ ಪ್ರೀತಿಯಿಂದ ನನ್ನ ಹೆಸರೇಳುತ್ತಾರೆ. ನಮ್ಮಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ. ಬೆಂಬಲಿಗರು ಸಿಎಂ ಎಂದು ಜೈಕಾರ ಹಾಕೋದು ಸರ್ವೇ ಸಾಮಾನ್ಯ ಏನೋ ಬದಲಾವಣೆ ಆಗುತ್ತೆ ಅನ್ನೋದು ಸರಿಯಲ್ಲ. ಇದೆಲ್ಲಾ ಕೇವಲ ಊಹಾಪೋಹ" ಎಂದರು.
"ಸಚಿವ ಎಚ್.ಸಿ.ಮಹದೇವಪ್ಪ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರಿಗೆ ದಸರಾ ನೋಡಲು ಆಗಮಿಸಿದ್ದೇನೆ. ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ನೋಡಿ ಖುಷಿಪಡುತ್ತೇನೆ. ಸಚಿವ ಮಹದೇವಪ್ಪ ಭೇಟಿಗೆ ವಿಶೇಷ ಅರ್ಥ ಇಲ್ಲ. ಮಹದೇವಪ್ಪ ಹಾಗೂ ನಮ್ಮ ಮನೆ ಅಕ್ಕ ಪಕ್ಕದಲ್ಲಿದೆ. ಹೀಗಾಗಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಮಾತನಾಡಿದೆ ಅಷ್ಟೇ" ಎಂದು ಸ್ಪಷ್ಟನೆ ನೀಡಿದರು.
ಕಳೆದ ಒಂದು ವಾರದಿಂದ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಬೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಸನ್ನಿಹಿತವಾಗಿದೆ. ಮುಂದಿನ ಸಿಎಂ ಆಗಿ ಪರಿಶಿಷ್ಟ ಸಮುದಾಯ ಮತ್ತು ಉತ್ತರಕರ್ನಾಟಕ ಕೋಟಾದ ಆಧಾರದ ಮೇಲೆ ಜಾರಕಿಹೊಳಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಗರಿಗೆದರಿದ್ದವು. ಮುಡಾ ಹಗರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ನಡುವೆಯೇ ಜಾರಕಿಹೊಳಿ ಅವರು ಪಕ್ಷದ ವರಿಷ್ಠರು ಮತ್ತು ವಿವಿಧ ಸಮುದಾಯಗಳ ನಾಯಕರನ್ನು ನಿರಂತರವಾಗಿ ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗೇ ಅಂತಹ ಊಹೆಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದವು.