
ನಾಲ್ವರು ಯೋಧರು ಹುತಾತ್ಮ | ಅಂತಿಮ ನಮನ ಸಲ್ಲಿಸಿದ ಸಿಎಂ; ಶೀಘ್ರ ಪರಿಹಾರ ಘೋಷಣೆ
ಜಮ್ಮು-ಕಾಶ್ಮೀರ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದರು. ಚಿಕ್ಕೋಡಿಯ ಧನರಾಜ್ ಸುಭಾಷ ಖೋತ್ ಮಣಿಪುರದಲ್ಲಿ ಹುತಾತ್ಮರಾಗಿದ್ದರು.
ಜಮ್ಮು- ಕಾಶ್ಮೀರದಲ್ಲಿ ಬುಧವಾರ ಅಪಘಾತಕ್ಕೀಡಾಗಿ ಹುತಾತ್ಮರಾದ ರಾಜ್ಯದ ಸೈನಿಕರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಅಂತಿಮ ಗೌರವ ಸಲ್ಲಿಸಿದರು.
ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಾದ ಬೆಳಗಾವಿಯ ದಯಾನಂದ ತಿರುಕಣ್ಣನವರ್, ಬಾಗಲಕೋಟೆಯ ಮಹೇಶ್ ನಾಗಪ್ಪ, ಕುಂದಾಪುರದ ಅನೂಪ್ ಪೂಜಾರಿ ಹಾಗೂ ಚಿಕ್ಕೋಡಿಯ ಧನರಾಜ್ ಸುಭಾಷ್ ಅವರ ಪಾರ್ಥೀವ ಶರೀರಕ್ಕೆ ಸರ್ಕಾರದ ವತಿಯಿಂದ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಜಮ್ಮು-ಕಾಶ್ಮೀರ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದರು. ಚಿಕ್ಕೋಡಿಯ ಧನರಾಜ್ ಸುಭಾಷ ಖೋತ್ ಅವರು ಮಣಿಪುರದ ಇಂಪಾಲಾ ಕಣಿವೆಗೆ ಸೇನಾ ವಾಹನ ಉರುಳಿಬಿದ್ದ ಪರಿಣಾಮ ಮೃತಪಟ್ಟಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎ ಸಿದ್ದರಾಮಯ್ಯ ಅವರು, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ಸೈನಿಕರು ಈ ದೇಶದ ಆಸ್ತಿ. ರಾಜ್ಯದ ನಾಲ್ವರು ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ನೋವಿನ ಸಂಗತಿ. ನಾಲ್ವರು ಯೋಧರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಸರ್ಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನು ಒದಗಿಸಲಾಗುವುದು ಎಂದು ಹೇಳಿದರು.
ಹುತಾತ್ಮ ಯೋಧರಿಗೆ ಸಿಗುವ ಸೌಲಭ್ಯವೇನು?
ಸೈನಿಕ ಮಂಡಳಿ ಹಾಗೂ ಪುನರ್ವಸತಿ ಇಲಾಖೆ ನಿಯಮಗಳ ಪ್ರಕಾರ ಹುತಾತ್ಮ ಯೋಧರ ಕುಟುಂಬಕ್ಕೆ ರಾಜ್ಯ ಸರ್ಕಾರ ಎರಡು ಎಕರೆ ನೀರಾವರಿ ಭೂಮಿ ಅಥವಾ ಎಂಟು ಎಕರೆ ಖುಷ್ಕಿ ಜಮೀನು, ಉದ್ಯೋಗ ಹಾಗೂ ನಿವೇಶನ ನೀಡಬೇಕಿದೆ.
ಆದರೆ, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹುತಾತ್ಮ ಯೋಧರಿಗೆ 50ಲಕ್ಷ ರೂ. ಪರಿಹಾರ ಹಾಗೂ 60x40 ಅಳತೆಯ ನಿವೇಶನ ನೀಡುವ ಬದಲು ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವುದಕ್ಕೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಮಾಜಿ ಸೈನಿಗಳ ಕ್ಷೇಮಾಭಿವೃದ್ಧಿ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಯಾವ ರೀತಿ ಪರಿಹಾರ ನೀಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.