
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಅತಿವೃಷ್ಠಿಯಿಂದ ಬೆಳೆ ಹಾನಿ, ಜಂಟಿ ಸಮೀಕ್ಷೆಗೆ ಸಿಎಂ ಸೂಚನೆ
ರಾಜ್ಯಕ್ಕೆ ನೀಡಲಾಗುವ ಎನ್‌ಡಿಆರ್‌ಎಫ್ ಪರಿಹಾರವನ್ನು ಹೆಚ್ಚಿಸುವಂತೆ ಕೇಂದ್ರಸರ್ಕಾರವನ್ನು ಹಲವು ಬಾರಿ ಕೋರಲಾಗಿದೆ. ಇದುವರೆಗೂ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಬೆಳೆಹಾನಿಯಾಗಿರುವುದಕ್ಕೆ ಪರಿಹಾರ ನೀಡಲು ಅನುಕೂಲವಾಗುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದ್ದು, ವರದಿ ಬಂದ ನಂತರ ಬೆಳೆಪರಿಹಾರವನ್ನು ರೈತರಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರದಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ನಂತರ ಬೆಳೆಹಾನಿ ಪರಿಹಾರ ವಿತರಿಸಲಾಗುವುದು. ರಾಜ್ಯದಲ್ಲಿ ಒಟ್ಟಾರೆ ಈ ಬಾರಿ ಅದೃಷ್ಟವಶಾತ್ ವಾಡಿಕೆಗಿಂತ ಶೇ.4 ರಷ್ಟು ಮಳೆ ಹೆಚ್ಚಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬೆಳೆ ಹಾನಿ ಹೆಚ್ಚು ಸಂಭವಿಸಿದ್ದು, ಬೆಳೆ ಪರಿಹಾರ ವಿತರಿಸಲಾಗುವುದು. 2024-25 ನೇ ಸಾಲಿನಲ್ಲಿ 656 ಕೋಟಿ ರೂ. ಬೆಳೆವಿಮೆ ಪಾವತಿಯಾಗಿದೆ. ಬೆಳೆವಿಮೆ ಮಾಡಿಕೊಳ್ಳದ ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಿಸಲಾಗುವುದು ಹಾಗೂ ರೈತರ ಬೇಡಿಕೆಯಂತೆ ಸಾಲಮನ್ನಾ ಮಾಡುವ ಬಗ್ಗೆ ಪರೀಶೀಲಿಸಲಾಗುವುದು ಎಂದರು.
ವಿಜಯಪುರದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆಗೆ ಬಳಸಿದ ಕಾರು ಪತ್ತೆಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಂತೆ ಜಿಲ್ಲಾ ಎಸ್‌ಪಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಜಾಗೃತರಾಗಿರುವಂತೆ ತಿಳಿಸಲು ಸೂಚಿಸಲಾಗಿದೆ. ಬ್ಯಾಂಕಿಗೆ ಸುರಕ್ಷತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು ಆಯಾ ಬ್ಯಾಂಕಿನ ಜವಾಬ್ದಾರಿಯಾಗಿರುತ್ತದೆ. ಪೊಲೀಸರು ಬ್ಯಾಂಕಿಗೆ ಸುರಕ್ಷತೆ ನೀಡುತ್ತಾರೆ. ಇಂತಹ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರವಾಹಕ್ಕೆ ಪರಿಹಾರ
ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಸಕಾಲದಲ್ಲಿಯೇ ವರದಿ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರವೇ ಈ ಬಗ್ಗೆ ನಿಧಾನ ನಿಲುವು ತಾಳಿದ್ದರಿಂದ, ರಾಜ್ಯ ಸರ್ಕಾರ, ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ, ಪರಿಹಾರವನ್ನು ಪಡೆಯಲಾಯಿತು. ಅನರ್ಹರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಅನರ್ಹರನ್ನು ಬಿಪಿಎಲ್ ಕಾರ್ಡ್‌ನ ಸೌಲಭ್ಯದಿಂದ ತೆಗೆದುಹಾಕುವಂತೆ ಹಾಗೂ ಅರ್ಹರಿಗೆ ಈ ಸೌಲಭ್ಯವನ್ನು ನೀಡುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಮನವಿಗೆ ಸ್ಪಂದಿಸದ ಕೇಂದ್ರ
ರಾಜ್ಯಕ್ಕೆ ನೀಡಲಾಗುವ ಎನ್‌ಡಿಆರ್‌ಎಫ್ ಪರಿಹಾರವನ್ನು ಹೆಚ್ಚಿಸುವಂತೆ ಕೇಂದ್ರಸರ್ಕಾರವನ್ನು ಹಲವು ಬಾರಿ ಕೋರಲಾಗಿದೆ. ಈ ಬಗ್ಗೆ ಕೇಂದ್ರ ವಿತ್ತಸಚಿವರನ್ನು ಹಾಗೂ ಕೇಂದ್ರ ಗೃಹಸಚಿವರನ್ನು ಖುದ್ದು ಭೇಟಿ ಮಾಡಲಾಗಿದ್ದರೂ, ಇದುವರೆಗೂ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಅನ್ನಭಾಗ್ಯದ ಅಕ್ಕಿ ಹೊರದೇಶಕ್ಕೆ ರಫ್ತಾಗುತ್ತಿರುವ ಕುರಿತು ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಲಾಗಿದೆ ಎ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.
ಜಾತಿಸಮೀಕ್ಷೆ, ಬಿಜೆಪಿಯಿಂದ ರಾಜಕಾರಣ
ಜಾತಿಸಮೀಕ್ಷೆ ನಮೂನೆಯಲ್ಲಿ ‘ನಾಸ್ತಿಕ’ ಕಾಲಂವನ್ನು ಸೇರಿಸಿರುವುದಕ್ಕೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದ್ದು, ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿಯ ಬಗ್ಗೆ ಸರ್ಕಾರ ತಿಳಿಯಬೇಕಾಗಿದೆ. ಸಮೀಕ್ಷೆ ವರದಿ ಬಂದ ನಂತರ, ಅದರಂತೆ ಸರ್ಕಾರದ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆಂಬ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಿದರು.
ಸೆ.22 ರಿಂದ ಅ.7 ರವರೆಗೆ ಜಾತಿಸಮೀಕ್ಷೆ
ಕ್ರಿಶ್ಚಿಯನ್ನರು ಹಾಗೂ ಮುಸಲ್ಮಾನರನ್ನು ಸೇರಿಸಿದಂತೆ ಎಲ್ಲಾ ಅಲ್ಪಸಂಖ್ಯಾತರು ಭಾರತದ ಪ್ರಜೆಗಳೇ. ಸಮೀಕ್ಷೆಗೆ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಿದ್ದು, ಸೆ. 22 ರಿಂದ ಅ. 7 ರವರೆಗೆ ರಾಜ್ಯದ ಪ್ರತಿ ಮನೆಗೂ ತೆರಳಿ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ಕಳೆದ ಬಾರಿಗಿಂತ 40 ಸಾವಿರ ಶಿಕ್ಷಕರನ್ನು ಹೆಚ್ಚಾಗಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಅಂತಿಮ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಈ ಬಗ್ಗೆ ರಾಜ್ಯಸರ್ಕಾರ ಕೇವಲ ಶಿಫಾರಸ್ಸು ಮಾಡಬಹುದಾಗಿರುತ್ತದೆ. ಈ ಬಗ್ಗೆ ಯಾರೂ ಸಹ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.