ಸ್ವಾತಂತ್ರ್ಯ ದಿನದಂದೇ ಸ್ಫೋಟ| ನಿಗೂಢ ಸ್ಫೋಟದ ತನಿಖೆ ಚುರುಕು, ಕುತೂಹಲ ಮೂಡಿಸಿದ ಘಟನೆ
x

ಸ್ವಾತಂತ್ರ್ಯ ದಿನದಂದೇ ಸ್ಫೋಟ| ನಿಗೂಢ ಸ್ಫೋಟದ ತನಿಖೆ ಚುರುಕು, ಕುತೂಹಲ ಮೂಡಿಸಿದ ಘಟನೆ

ಮೇಲ್ನೋಟಕ್ಕೆ ಸಿಲಿಂಡರ್‌ ಸ್ಪೋಟ ಆಗಿರಬಹುದು ಎಂಬ ಅನುಮಾನವಿದೆ. ಘಟನೆ ದುರದೃಷ್ಟಕರ, ಕೂಡಲೇ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚು ಸಣ್ಣ ಮನೆಗಳಿವೆ. ಸ್ಫೋಟದಿಂದ 13 ಮನೆಗಳಿಗೆ ಹಾನಿಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.


ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ಶುಕ್ರವಾರ ಸಂಭವಿಸಿದ ಅನುಮಾನಾಸ್ಪದ ಸ್ಫೋಟದಲ್ಲಿ ಬಾಲಕ ಮೃತಪಟ್ಟು, 9 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ ರಭಸಕ್ಕೆ ಒಂದು ಮನೆ ಸಂಪೂರ್ಣ ಹಾನಿಯಾಗಿದ್ದು, 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಅನುಮಾನಾಸ್ಪದ ಸ್ಫೋಟದ ವಿಷಯ ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಸಿಲಿಂಡರ್‌ ಸ್ಫೋಟ ಎಂಬುದು ತಿಳಿದಿದೆ. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಅನಿಲದ ವಾಸನೆ ಇಲ್ಲ. ಹಾಗಾಗಿ ಈ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಫೊರೆನ್ಸಿಕ್‌, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌ ಹಾಗೂ ಪೊಲೀಸರಿಗೆ ಸೂಚಿಸಲಾಗಿದೆ. ವರದಿ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.

ಮೇಲ್ನೋಟಕ್ಕೆ ಸಿಲಿಂಡರ್‌ ಸ್ಪೋಟ ಆಗಿರಬಹುದು ಎಂಬ ಅನುಮಾನವಿದೆ. ಘಟನೆ ದುರದೃಷ್ಟಕರ, ಕೂಡಲೇ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚು ಸಣ್ಣ ಮನೆಗಳಿವೆ. ಸ್ಫೋಟದಿಂದ 13 ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳನ್ನು ರಿಪೇರಿ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರರಾವ್‌ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸ್ಫೋಟದಲ್ಲಿ ಗಾಯಗೊಂಡಿರುವ 9 ಮಂದಿಯನ್ನು ಸಂಜಯಗಾಂಧಿ, ಇಂದಿರಾಗಾಂಧಿ ಹಾಗೂ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಬಾರತ್‌ ಎಂಬ ಬಾಲಕ ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮನೆಯ ಮಾಲೀಕರಾದ ಕಸ್ತೂರಮ್ಮ ಶೇ 30 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದರು.

5 ಲಕ್ಷ ರೂ. ಪರಿಹಾರ ಘೋಷಣೆ

ಸ್ಫೋಟದಲ್ಲಿ ಮೃತಪಟ್ಟಿರುವ ಮುಬಾರಕ್‌ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಗಾಯಗೊಂಡಿರುವ ನರಸಮ್ಮ , ಶಬೀನಾ ಬಾನು, ಫಾತಿಮಾ, ಖಯಾಲಾ, ಸುಬ್ರಮಣಿ, ಶೇಖ್‌ ನಜೀದ್‌ ಉಲ್ಲಾ, ಪ್ರಮೀಳಾ ಹಾಗೂ ರಾಜೇಶ್‌ ಎಂಬುವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸರ್ಕಾರವೇ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ಹೇಳಿದರು.

ಗಾಯಾಳು ಕಸ್ತೂರಮ್ಮ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಬಿಬಿಎಂಪಿಯಿಂದ ಹೊಸದಾಗಿ ಮನೆ ಕಟ್ಟಿಕೊಡಲಾಗುವುದು. ಹಾನಿಗೊಳಗಾಗಿರುವ ಮನೆಗಳನ್ನೂ ಪಾಲಿಕೆಯಿಂದಲೇ ರಿಪೇರಿ ಮಾಡಿಸಿ ಕೊಡಲಾಗುವುದು. ಕಟ್ಟಡ ತ್ಯಾಜ್ಯ ತೆರವುಗೊಳಿಸಿದ ಬಳಿಕ ಫೊರೆನ್ಸಿಕ್‌, ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್‌ ಅಧಿಕಾರಿಗಳು ತನಿಖೆ ನಡೆಸಿ, ವರದಿ ನೀಡಲಿವೆ ಎಂದರು. ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟದ ಬಗ್ಗೆ ಸ್ಥಳೀಯರ ಅನುಮಾನ

ವಿಲ್ಸನ್‌ ಗಾರ್ಡನ್‌ ಬಳಿ ಸಂಭವಿಸಿದ ಸ್ಫೋಟದ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್‌ ಸ್ಫೋಟ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ, ಘಟನಾ ಸ್ಥಳದಲ್ಲಿ ಗ್ಯಾಸ್‌ ಸೋರಿಕೆಯ ವಾಸನೆಯೂ ಇಲ್ಲ. ಅಲ್ಲದೇ ಸ್ಫೋಟದ ರಭಸಕ್ಕೆ 13 ಮನೆಗಳು ಹಾನಿಯಾಗಿವೆ. ಹಾಗಾಗಿ ಘಟನೆ ಬಗ್ಗೆ ಅನುಮಾನವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Read More
Next Story