
ಮುಖ್ಯಮಂತ್ರಿ ಸಿದ್ದರಾಮಯ್ಯ
CM Medical Fund | ಎರಡು ವರ್ಷದಲ್ಲಿ 57 ಸಾವಿರ ಬಡ ರೋಗಿಗಳಿಗೆ ಸಿಎಂ ವೈದ್ಯಕೀಯ ಪರಿಹಾರ ನಿಧಿಯಡಿ ಚಿಕಿತ್ಸಾ ವೆಚ್ಚ
ಕಾರ್ಪಸ್ ಹಣ 110 ಕೋಟಿ ರೂ.ಗಳನ್ನು ನಿಶ್ಚಿತ ಠೇವಣಿಯಲ್ಲಿರಿಸಲಾಗಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ಗಂಭೀರ ಹಾಗೂ ಅತೀ ವಿರಳ ರೋಗಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸುತ್ತಿದೆ.
ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಯ ಅನುದಾನದಿಂದ 2023-24 ಹಾಗೂ 2024-25ನೇ ಸಾಲಿನಲ್ಲಿ ಒಟ್ಟು 57,738 ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲಾಗಿದೆ.
2023-24 ನೇ ಸಾಲಿನಲ್ಲಿ 30,296 ಫಲಾನುಭವಿಗಳಿಗೆ ಸಿಎಂ ವೈದ್ಯಕೀಯ ಪರಿಹಾರ ನಿಧಿಯಡಿ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಇದೇ ಸಾಲಿನಲ್ಲಿ ಇರಿಸಿದ ಕಾರ್ಪಸ್ ನಿಶ್ಚಿತ ಮೊತ್ತದ ಠೇವಣಿಯಿಂದ ಬಂದ ಬಡ್ಡಿಯ ಹಣದಲ್ಲಿ 2024-25ನೇ ಸಾಲಿನಲ್ಲಿ 27,442 ಫಲಾನುಭವಿಗಳಿಗೆ ವೆಚ್ಚ ಭರಿಸಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಕಾರ್ಪಸ್ ನಿಶ್ಚಿತ ಮೊತ್ತದ ಬಡ್ಡಿಯಿಂದ ರೂ.9.30 ಕೋಟಿ ರೂ. ಬಂದಿದೆ. ಅದನ್ನು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದೆ.
ಕಾರ್ಪಸ್ ಹಣ 110 ಕೋಟಿ ರೂ.ಗಳನ್ನು ನಿಶ್ಚಿತ ಠೇವಣಿಯಲ್ಲಿರಿಸಲಾಗಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ಗಂಭೀರ ಹಾಗೂ ಅತೀ ವಿರಳ ರೋಗಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಸರ್ಕಾರ ಚಿಕಿತ್ಸಾ ವೆಚ್ಚ ಭರಿಸುತ್ತಿದೆ.
ಸರ್ಕಾರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ರೋಗಿಗಳಿಗೆ ನೆರವಾಗುವ ಸಲುವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಯಾವ ಆಸ್ಪತ್ರೆಗಳಲ್ಲಿ ಅನುದಾನ ಬಳಕೆ ?
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಜಯದೇವ ಹೃದ್ರೋಗ ಸಂಸ್ಥೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಎಸ್.ಡಿ.ಎಸ್.ಟಿ.ಬಿ. ಆಸ್ಪತ್ರೆ, ನೆಫ್ರೋ ಯೂರಾಲಜಿ ಸಂಸ್ಥೆ, ಪಿ.ಎಂ.ಎಸ್.ಎಸ್.ವೈ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಮಿಂಟೋ ಪ್ರಾದೇಶಿಕ ಕಣ್ಣಿನ ಆಸ್ಪತ್ರೆ, ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗಳು ಸಿಎಂ ಪರಿಹಾರ ನಿಧಿಯ ಅನುದಾನವನ್ನು ಬಳಕೆ ಮಾಡಿಕೊಂಡಿವೆ. ಈಗ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಾಣಿ ವಿಲಾಸ ಆಸ್ಪತ್ರೆ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳು ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿ ಸೊಸೈಟಿಯ (KCMMR) ಅನುದಾನಕ್ಕೆ ಬೇಡಿಕೆ ಸಲ್ಲಿಸಿವೆ.
ಮಾನವೀಯತೆ ದೃಷ್ಟಿಯಿಂದ ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರುವ ಫಲಾನುಭವಿಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ.
ಹೊರ ರಾಜ್ಯದ ಬಡ ರೋಗಿಗಳಿಗೂ ನೆರವು
ಕರ್ನಾಟಕ ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಮಾನದಂಡಗಳಂತೆ ಹೊರರಾಜ್ಯಗಳ ಬಡ ರೋಗಿಗಳಿಗೂ ಅನ್ವಯಿಸಿ, ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ರಾಜ್ಯದ ರೋಗಿಗಳಿಗೆ ಮೊದಲ ಆದ್ಯತೆ ನೀಡಿ, ಬಳಿಕ ಹೊರ ರಾಜ್ಯದ ಬಡ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಆಧಾರ್ ಮಾಹಿತಿಯನ್ನು ಪರಿಗಣಿಸಿ, ವೆಚ್ಚ ಭರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.