Federal Explainer | ಚಾಮುಂಡೇಶ್ವರಿಗೆ ಚಿನ್ನದ ರಥ: ಸರ್ಕಾರದ ಸಿದ್ಧತೆ ಏನು?
x

Federal Explainer | ಚಾಮುಂಡೇಶ್ವರಿಗೆ ಚಿನ್ನದ ರಥ: ಸರ್ಕಾರದ ಸಿದ್ಧತೆ ಏನು?

ಚಾಮುಂಡೇಶ್ವರಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗುವ ಕಾಣಿಕೆಯಲ್ಲಿ ಚಿನ್ನದ ರಥ ನಿರ್ಮಿಸಬೇಕು. ಒಂದು ವೇಳೆ ಕಾಣಿಕೆಗಿಂತ ಹೆಚ್ಚು ವೆಚ್ಚವಾದಲ್ಲಿ ಅದನ್ನು ಸರ್ಕಾರ ಭರಿಸಬೇಕು ಎಂಬುದು ಭಕ್ತರ ಆಗ್ರಹ.


ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಮಾಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಪ್ರಸ್ತಾವ ಸಲ್ಲಿಸುವಂತೆ ಕಂದಾಯ ಇಲಾಖೆಯ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಮಾಡಿಸಬೇಕೆಂಬ ಭಕ್ತರ ಸಂಕಲ್ಪದ ಕುರಿತು ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಥ ನಿರ್ಮಾಣ ಸಂಬಂಧ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಹಾಗಾದರೆ ಚಿನ್ನದ ರಥ ಏಕೆ, ಅದರ ಮೌಲ್ಯವೆಷ್ಟು, ಹಣಕಾಸು ಹೊಂದಿಕೆ ಹೇಗೆ ಎಂಬ ವಿವರ ಇಲ್ಲಿದೆ.

ಚಿನ್ನದ ರಥ ಏಕೆ?

ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಸದ್ಯ ಮರದ ರಥವಿದೆ. 1982 ರಲ್ಲಿ ಮರದ ರಥವನ್ನು ತಮಿಳುನಾಡಿನ ಕೊಯಮತ್ತೂರು ಭಕ್ತರು ನಿರ್ಮಿಸಿ, ದೇವಿಗೆ ಸಮರ್ಪಿಸಿದ್ದರು. ಈಗ ಮರದ ರಥವು ಶಿಥಿಲವಾಗಿದ್ದು, ಚಿನ್ನದ ರಥ ನಿರ್ಮಿಸುವಂತೆ ಭಕ್ತರು ಬೇಡಿಕೆ ಸಲ್ಲಿಸಿದ್ದರು. ಅವರ ಸಂಕಲ್ಪಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ.

ಚಿನ್ನದ ರಥದ ಮೌಲ್ಯವೆಷ್ಟು?

ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಮಾಡಿಸುವ ಸಂಬಂಧ ಈ ಹಿಂದೆಯೂ ಪ್ರಸ್ತಾವ ಸಲ್ಲಿಕೆಯಾಗಿತ್ತು. ಇದಕ್ಕೆ 100 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ದುಬಾರಿಯಾದ್ದರಿಂದ ಪ್ರಸ್ತಾವವನ್ನು ಮೂಲೆಗೆ ಸರಿಸಲಾಗಿತ್ತು. ಈಗ ಮತ್ತೆ ಹೊಸದಾಗಿ ಪ್ರಸ್ತಾವ ಬಂದಿದ್ದು, ಧಾರ್ಮಿಕ ದತ್ತಿ ಇಲಾಖೆ ಪರಿಶೀಲನೆ ನಡೆಸಿ ಅಂದಾಜು ವೆಚ್ಚ ತಿಳಿಸಲಿದೆ.

ಹಣ ಹೊಂದಿಕೆ ಹೇಗೆ?

ಚಿನ್ನದ ರಥ ನಿರ್ಮಾಣಕ್ಕೆ ದೊಡ್ಡ ಮೊತ್ತ ವ್ಯಯಿಸಬೇಕಾಗಿದೆ. ಈ ಹಣ ಸಂಗ್ರಹಿಸಲು ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರತ್ಯೇಕ ಹುಂಡಿ ತೆರೆಯಲು ಇಡಬೇಕು. ಈ ಹುಂಡಿಯಲ್ಲಿ ಸಂಗ್ರಹವಾಗುವ ಕಾಣಿಕೆಯಲ್ಲಿ ಚಿನ್ನದ ರಥ ನಿರ್ಮಿಸಬೇಕು. ಒಂದು ವೇಳೆ ಕಾಣಿಕೆಗಿಂತ ಹೆಚ್ಚು ವೆಚ್ಚವಾದಲ್ಲಿ ಅದನ್ನು ಸರ್ಕಾರ ಭರಿಸಬೇಕು ಎಂದು ಭಕ್ತರ ಆಗ್ರಹ.

ಸಿಎಂಗೆ ಮಾಡಿದ ಮನವಿಯಲ್ಲೇನಿದೆ?

ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆ. ಚಾಮುಂಡೇಶ್ವರಿ ಬೆಟ್ಟ, ದೇವಸ್ಥಾನ ಹಾಗೂ ಚಾಮುಂಡೇಶ್ವರಿ ದೇವಿಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ. ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕೆಂಬುದು ಭಕ್ತರ ಸಂಕಲ್ಪ. ಮುಂದಿನ ದಸರಾ ವೇಳೆಗೆ ಚಿನ್ನದ ರಥ ನಿರ್ಮಿಸಿ ರಥೋತ್ಸವ ನಡೆಸಬೇಕು ಎಂದು ದಿನೇಶ್ ಗೂಳಿಗೌಡ ಪತ್ರದಲ್ಲಿ ಮನವಿ ಮಾಡಿದ್ದಾರೆ.

ದೇವಿಯ ಐತಿಹ್ಯವೇನು?

ಚಾಮುಂಡೇಶ್ವರಿ ದೇಗುಲಕ್ಕೆ 500 ವರ್ಷಗಳ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಮೊದಲು ದೇವಿಯ ಚಿಕ್ಕ ಗುಡಿ ಇತ್ತು. ಕ್ರಮೇಣ ಪ್ರವರ್ಧಮಾನಕ್ಕೆ ಬಂದು ಚಾಮುಂಡೇಶ್ವರಿ ಕ್ಷೇತ್ರ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. 12ನೇ ಶತಮಾನದ ಹೊಯ್ಸಳ ದೊರೆ ವಿಷ್ಣುವರ್ಧನ ಹಾಗೂ 17ನೇ ಶತಮಾನದ ವಿಜಯನಗರ ಅರಸರು ಕೊಡುಗೆ ನೀಡಿದ್ದಾರೆ. ದೇವಿಯ ಆರಾಧಕರಾಗಿದ್ದ ಮೈಸೂರು ಅರಸರು ದೇವಸ್ಥಾನವನ್ನು ಲೋಕ ಕಲ್ಯಾಣಾರ್ಥವಾಗಿ ಅಭಿವೃದ್ಧಿಪಡಿಸಿದರು. 1827 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ದೊಡ್ಡ ಗೋಪುರ ಕಟ್ಟಿಸಿದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.

Read More
Next Story