ಪ್ರಜ್ವಲ್ ಪ್ರಕರಣ ಭೇದಿಸಿದ ಎಸ್​ಐಟಿ ತಂಡಕ್ಕೆ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿ ಪದಕಕ್ಕೆ ಶಿಫಾರಸು
x

ಪ್ರಜ್ವಲ್ ಪ್ರಕರಣ ಭೇದಿಸಿದ ಎಸ್​ಐಟಿ ತಂಡಕ್ಕೆ ಮುಖ್ಯಮಂತ್ರಿ ಪದಕ, ರಾಷ್ಟ್ರಪತಿ ಪದಕಕ್ಕೆ ಶಿಫಾರಸು

ರಾಜಕೀಯ ಒತ್ತಡಗಳಿದ್ದರೂ ಅದಕ್ಕೆ ಮಣಿಯದೆ ನ್ಯಾಯಾಲಯಕ್ಕೆ ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ತಂಡ ಯಶಸ್ವಿಯಾಗಿದೆ. ಸರ್ಕಾರದ ವತಿಯಿಂದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಗೃಹ ಸಚಿವರು ಹೇಳಿದ್ದಾರೆ.


ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಈ ಪ್ರಕರಣದ ಯಶಸ್ವಿ ತನಿಖೆ ನಡೆಸಿದ ವಿಶೇಷ ತನಿಖಾ ತಂಡಕ್ಕೆ (SIT) ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರವು ತಂಡದ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದ್ದು, ಮುಖ್ಯಮಂತ್ರಿ ಪದಕ ನೀಡಿ ಗೌರವಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವರು, "ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವುದು ಐತಿಹಾಸಿಕ ತೀರ್ಪು. ಈ ತೀರ್ಪಿನ ಸಂಪೂರ್ಣ ಶ್ರೇಯಸ್ಸು ವಿಶೇಷ ತನಿಖಾ ತಂಡಕ್ಕೆ ಸಲ್ಲಬೇಕು. ಎಷ್ಟೇ ರಾಜಕೀಯ ಒತ್ತಡಗಳಿದ್ದರೂ ಅದಕ್ಕೆ ಮಣಿಯದೆ, ಅತ್ಯಂತ ಅಚ್ಚುಕಟ್ಟಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಸಮರ್ಪಕ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ತಂಡ ಯಶಸ್ವಿಯಾಗಿದೆ. ಸರ್ಕಾರದ ವತಿಯಿಂದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ತನಿಖಾ ತಂಡದ ಈ ಮಹತ್ವದ ಸಾಧನೆಯನ್ನು ಗುರುತಿಸಿ, "ಈ ವಿಶೇಷ ತನಿಖಾ ತಂಡಕ್ಕೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗುವುದು. ಅಷ್ಟೇ ಅಲ್ಲದೆ, ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡಲಾಗುವುದು" ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಮನೆಗೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಈ ಸಂಕೀರ್ಣ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವು ಈ ಗೌರವಕ್ಕೆ ಪಾತ್ರವಾಗಿದೆ.

Read More
Next Story