ವಿಆರ್‌ಎಸ್‌ಗೆ ಧಾರವಾಡ ಎಎಸ್ಪಿ ನಿರ್ಧಾರ; ಸಿಎಂ ಸಿದ್ದರಾಮಯ್ಯಗೆ ಮುಜುಗರ
x

ಎನ್.ವಿ ಭರಮನಿ ಜೊತೆ ಸಿ.ಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. 

ವಿಆರ್‌ಎಸ್‌ಗೆ ಧಾರವಾಡ ಎಎಸ್ಪಿ ನಿರ್ಧಾರ; ಸಿಎಂ ಸಿದ್ದರಾಮಯ್ಯಗೆ ಮುಜುಗರ

ಹಿರಿಯ ಪೊಲೀಸ್ ಅಧಿಕಾರಿ ಎನ್.ವಿ. ಭರಮನಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.


ಸಾರ್ವಜನಿಕವಾಗಿ ಅಪಮಾನ ಮಾಡಿದ ಸಿಎಂ ವರ್ತನೆಯಿಂದ ಬೇಸತ್ತು ಸ್ವಯಂ ನಿವೃತ್ತಿ ಪಡೆಯಲು ಮುಂದಾದ ಧಾರವಾಡ ಎಎಸ್‌ಪಿ ನಾರಾಯಣ ಭರಮನಿ ಅವರನ್ನು ಗುರುವಾರ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ.

ಎನ್.ವಿ. ಭರಮನಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಯ ಈ ಒತ್ತಡ ತಂತ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿದೆ.

ಪ್ರಕರಣದ ಹಿನ್ನೆಲೆ

ಏಪ್ರಿಲ್‌ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಕಾಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೈಡ್ರಾಮ ನಡೆಸಿದ್ದರು. ಆಗ ವೇದಿಕೆ ಮೇಲೆ ಭಾಷಣ ಆರಂಭಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಸಮಾವೇಶದ ಭದ್ರತೆ ಉಸ್ತುವಾರಿ ನೋಡಿಕೊಂಡಿದ್ದ ಧಾರವಾಡ ಎಎಸ್ಪಿ ಎನ್.ವಿ. ಭರಮನಿ ಅವರನ್ನು ಹೊಡೆಯುವ ರೀತಿ ಕೈ ಎತ್ತಿ ಸಿಟ್ಟು ಪ್ರದರ್ಶಿಸಿದ್ದರು.

ಮುಖ್ಯಮಂತ್ರಿಯ ಈ ವರ್ತನೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗಿದ್ದ ಭರಮನಿ ಅವರು ಜೂನ್ 12 ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಿಆರ್‌ಎಸ್ ಕೋರಿ ಪತ್ರ ಬರೆದಿದ್ದರು.

ತಮ್ಮ ಪತ್ರದಲ್ಲಿ, "ನಾನು ಮಾಡದ ತಪ್ಪಿಗೆ ಮುಖ್ಯಮಂತ್ರಿಗಳಿಂದ ಸಾರ್ವಜನಿಕವಾಗಿ ಅವಮಾನ ಮತ್ತು ಅಪಮಾನಕ್ಕೆ ಒಳಗಾಗಿರುವುದರಿಂದ ನನಗೆ ಬೇರೆ ಆಯ್ಕೆ ಇಲ್ಲ. ದಯವಿಟ್ಟು ನನ್ನ ರಾಜೀನಾಮೆ ಸ್ವೀಕರಿಸಲು ವಿನಂತಿಸುತ್ತೇನೆ" ಎಂದು ಉಲ್ಲೇಖಿಸಿದ್ದರು.

ಸಿಎಂ ಸ್ಪಷ್ಟನೆ

ಸಿಎಂ ಸಿದ್ದರಾಮಯ್ಯ ಅವರು ಭರಮನಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಘಟನೆಯು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಬೇಕು ಅಂತ ಮಾಡಿದ ಕೆಲಸವಲ್ಲ. ನಿನಗೆ ಅಗೌರವ ಇಲ್ಲವೇ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ" ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರಿಂದ ತಮಗೆ ಬೇಸರವಾಗಿತ್ತು ಎಂದು ಸಿಎಂ ತಿಳಿಸಿದ್ದಾರೆ.

ಸರ್ಕಾರದ ಪ್ರಯತ್ನ

ರಾಜೀನಾಮೆ ನಿರ್ಧಾರ ಕೈ ಬಿಡುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಕೂಡ ಭರಮನಿ ಅವರೊಂದಿಗೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದರು.

ಬೆಳಗಾವಿಯಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆ ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ, ಭರಮನಿ ಅವರು ತಮ್ಮ ವಿಆರ್‌ಎಸ್ ನಿರ್ಧಾರಕ್ಕೆ ಅಚಲವಾಗಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ವಲಯದಲ್ಲಿ ಈ ಘಟನೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿವೆ.

Read More
Next Story