ಸರಣಿ ಸ್ಫೋಟ ಬೆದರಿಕೆ: ಸಿಎಂ, ಡಿಸಿಎಂಗೆ ಇ-ಮೇಲ್!
ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದ ರಾಮೇಶ್ವರಂ ಕೆಫೆ ಸ್ಫೋಟ ಘಟನೆಯ ಬೆನ್ನಲ್ಲೇ, ರಾಜ್ಯದ ಜನ ಜಂಗಳಿಯ ಸಾರ್ವಜನಿಕ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಕರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪೊಲೀಸ್ ಮುಖ್ಯಸ್ಥರಿಗೆ ಬಂದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮಾರ್ಚ್ 1ರಂದು ರಾಮೇಶ್ವರಂ ಕೆಫೆ ಸ್ಫೋಟ ಘಟನೆ ನಡೆದ ಮಾರನೇ ದಿನವೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರ ಅಧಿಕೃತ ಇಮೇಲ್ ಗೆ ಬೆದರಿಕೆ ಇ ಮೇಲ್ ಬಂದಿದೆ. 2.5 ಮಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿ ಹಣ ನೀಡದೇ ಇದ್ದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್, ರೈಲು, ಬಸ್ ನಿಲ್ದಾಣಗಳಲ್ಲಿ ಸರಣಿ ಸ್ಫೋಟ ನಡೆಸುವುದಾಗಿ ಬೆದರಿಸಿದ್ದಾನೆ.
ಈ ಬೆದರಿಕೆ ಇ ಮೇಲ್ ಬಂದಿರುವ ವಿಷಯ ಮಂಗಳವಾರ ಬಹಿರಂಗವಾಗಿದ್ದು, ಸಿಸಿಬಿ ಪೊಲೀಸರು ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆದರಿಕೆ ಇ-ಮೇಲ್ ಬಂದಿರುವುದನ್ನು ʼದ ಫೆಡರಲ್- ಕರ್ನಾಟಕʼಕ್ಕೆ ಖಚಿತಪಡಿಸಿದ ಬೆಂಗಳೂರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ ಬೆದರಿಕೆ ಇ ಮೇಲ್ ಬಂದಿರುವ ಐಡಿಯ ವಿವರಗಳನ್ನು ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ಸದ್ಯದಲ್ಲೇ ಅದರ ಮೂಲ ಪತ್ತೆ ಮಾಡಲಿದ್ದಾರೆ” ಎಂದು ವಿವರಿಸಿದರು.