ಸಿಎಂ-ಡಿಸಿಎಂ ಜಂಟಿ ಸಿಟಿ ರೌಂಡ್ಸ್ | ಮಳೆ ಹಾನಿ ಮುನ್ನೆಚ್ಚರಿಕಾ ಕ್ರಮ: ಅಧಿಕಾರಿಗಳಿಗೆ ಸೂಚನೆ
x

ಸಿಎಂ-ಡಿಸಿಎಂ ಜಂಟಿ ಸಿಟಿ ರೌಂಡ್ಸ್ | ಮಳೆ ಹಾನಿ ಮುನ್ನೆಚ್ಚರಿಕಾ ಕ್ರಮ: ಅಧಿಕಾರಿಗಳಿಗೆ ಸೂಚನೆ


ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಜಂಟಿಯಾಗಿ ಬುಧವಾರ(ಏ.22) ಬೆಳಗ್ಗೆ ಬೆಂಗಳೂರು ಸಿಟಿ ರೌಂಡ್ಸ್‌ ನಡೆಸಿದರು. ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಪ್ರವಾಹ ಮತ್ತು ಮಳೆ ಹಾನಿ ತಡೆಗಾಗಿ ಬಿಬಿಎಂಪಿ ಮತ್ತು ಬಿಡಿಎ ಗಳು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

ಸಿಟಿ ರೌಂಡ್ಸ್ ಗೆ ಬಂದ ಮುಖ್ಯಮಂತ್ರಿಗಳಿಗೆ ಬೆಂಗಳೂರು ನಗರವಾಸಿಗಳು ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಬಗ್ಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ಸಮಸ್ಯೆಗಳನ್ನು ಆಲಿಸುತ್ತ ಸಿಎಂ ಗೆ ಸಾರ್ವಜನಿಕರು ಮುಗಿಬಿದ್ದು ಗ್ಯಾರಂಟಿ ಯೋಜನೆಗಳಿಂದ ತಮ್ಮ ಕುಟುಂಬಗಳಿಗೆ ಆಗಿರುವ ಅನುಕೂಲಗಳನ್ನು ವಿವರಿಸಿ ಅಭಿನಂದಿಸಿರುವುದು ವಿಶೇಷವಾಗಿತ್ತು.

ಸಿಟಿ ರೌಂಡ್ಸ್ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲ್ಕ್ ಬೋರ್ಡ್ ಮೆಟ್ರೋ ಸ್ಟೇಷನ್ ಕಾಮಗಾರಿ ಮತ್ತು BMRCL ನಿರ್ಮಿಸುತ್ತಿರುವ SWD ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿನ ಕೋಡಿ ಚಿಕ್ಕನಹಳ್ಳಿಯ ವಾರ್ಡ್‌ 188ರಲ್ಲಿ ರಾಜಕಾಲುವೆಯಿಂದ ನೀರು ಹೊರಗೆ ಹರಿದು, ಮನೆಗಳಿಗೆ ನುಗ್ಗುತ್ತಿದೆ. ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್‌ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್‌ ಮಾಡಿ ಮಡಿವಾಳ ಕೆರೆಗೆ ಹರಿಸಲು ಮುಖ್ಯಮಂತ್ತಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. 4.3 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಲು ಸೂಚಿಸಿದರು.


ಸಿಲ್ಕ್‌ ಬೋರ್ಡ್‌ನ ಹೊಸೂರು ಮುಖ್ಯರಸ್ತೆಯಲ್ಲಿ ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿಗಳು ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಮಂಡಿಸಲು ಸೂಚಿಸಿದರು. ಜೊತೆಗೆ ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಈಜಿಪುರದಲ್ಲಿ 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದ ನಂತರ BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್‌ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4 ರಿಂದ 6 ರಷ್ಟು ಪ್ರಗತಿಯಾಗಿದೆ.

ಈ ಕಾಮಗಾರಿ ವಿಳಂಬದ ಮಾಹಿತಿ ತಿಳಿದ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡುವಂತೆ ಸಿಎಂ ಸೂಚಿಸಿದರು.

ʻʻಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲಾ, ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡ್ವಾ, ನಿನ್ನ ಕೈಲಿ ಆಗದಿದ್ದರೆ ಜಾಗ ಖಾಲಿ ಮಾಡುʼʼ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸ್ಪಷ್ಟ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಳೆಯಾಗಲಿ ಜಾಸ್ತಿ ಮಳೆಯಾದಷ್ಟೂ ನಮಗೆ ಒಳ್ಳೆಯದು. ಹೆಚ್ಚು ಮಳೆ ಬಂದು ತಮಿಳುನಾಡಿಗೂ ನೀರು ಹರಿಯಲಿ ಎಂದು ಹೇಳಿದ್ದಾರೆ.

ಮಳೆ ಹಾನಿ ವೀಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು ಇಂದು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ ಮಾಡುತ್ತಿದ್ದೇವೆ. ಕೆಲವು ಜಾಗ ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ರಿಪೋರ್ಟ್ ಬಂದಿದೆ ಅಲ್ಲಿಗೆ ಭೇಟಿ ನೀಡುತ್ತಿದ್ದೇವೆ. ಆಡಳಿತ ಚುರುಕು ಮಾಡಬೇಕು ಎಂದು ಈ ಕ್ರಮ ಕೈಗೊಂಡಿದ್ದೇವೆ ಎಂದರು.

Read More
Next Story