ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಅವರದೇ ನೇತೃತ್ವ; ಡಿಕೆಶಿಗೆ ತಪ್ಪಲಿದೆಯೇ ಕೆಪಿಸಿಸಿ ಪಟ್ಟ?
x

ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಅವರದೇ ನೇತೃತ್ವ; ಡಿಕೆಶಿಗೆ ತಪ್ಪಲಿದೆಯೇ ಕೆಪಿಸಿಸಿ ಪಟ್ಟ?

ʼಐದು ವರ್ಷ ನಾನೇ ಸಿಎಂʼ ಎಂದು ಸಿದ್ದರಾಮಯ್ಯ ಅವರು ಹೇಳಿದ ಮೇಲೆ ಅದು ಸುಪ್ರೀಂಕೋರ್ಟ್ ತೀರ್ಪು ಇದ್ದಂತೆ. ನಿನ್ನೆಯೇ ತೀರ್ಪು ಬಂದಿದೆ. ಹಾಗಾಗಿ ಎಲ್ಲವೂ ನಿನ್ನೆಗೆ ಮುಗಿದು ಹೋಗಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.


ʼಐದು ವರ್ಷ ನಾನೇ ಸಿಎಂʼ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಸಿಎಂ ಆಪ್ತ ಸಚಿವರು, ಶಾಸಕರು ಬಣ ರಾಜಕಾರಣದಲ್ಲಿ ಮೇಲುಗೈ ಸಾಧಿಸಿದ ಉಮೇದಿನಲ್ಲಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಮುಂದಾಳತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, 2028 ರ ರಾಜ್ಯ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯಲಿದೆ. ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಲಾಗದು. ಆದರೆ, ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.

ʼಐದು ವರ್ಷ ನಾನೇ ಸಿಎಂʼ ಎಂದು ಸಿದ್ದರಾಮಯ್ಯ ಅವರು ಹೇಳಿದ ಮೇಲೆ ಅದು ಸುಪ್ರೀಂಕೋರ್ಟ್ ತೀರ್ಪು ಇದ್ದಂತೆ. ನಿನ್ನೆಯೇ ತೀರ್ಪು ಬಂದಿದೆ. ಹಾಗಾಗಿ ಎಲ್ಲವೂ ನಿನ್ನೆಗೆ ಮುಗಿದು ಹೋಗಿದೆ. ಆ ಬಗ್ಗೆ ಮಾತನಾಡುವುದು ಏನೂ ಇಲ್ಲ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ.

2028ರ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯಲಿದೆ. ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರಬಹುದು. ಸಿದ್ದರಾಮಯ್ಯ ಅವರು ಸ್ಪರ್ಧಿಸಬೇಕು ಎಂಬುದು ನಮ್ಮ ಅಭಿಲಾಷೆ, ಅದರಲ್ಲೇ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಇಲ್ಲ ಎಂಬ ತೀರ್ಪು ಕೊಟ್ಟಾಗಿದೆ. ಏನಿದ್ದರೂ ಡಬಲ್ ಬೆಂಚ್ ಗೆ ಹೋಗಲು ಅವಕಾಶವಿದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ ಎಂದದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು ಎಂದು ಈ ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಈಗಲೂ ಆ ಮಾತಿಗೆ ಬದ್ಧ. ಈ ಬಗ್ಗೆ ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 2028 ರೊಳಗೆ ಅವಕಾಶ ಸಿಕ್ಕಿದರೆ ನೋಡೋಣ, ಅಲ್ಲಿಯವರೆಗೆ ಸಿಎಂ ಬದಲಾವಣೆ ಮಾತೇ ಇಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸೌಹಾರ್ದಯುತವಾಗಿ ಊಟಕ್ಕೆ ಸೇರಿದ್ದೆವು. ಅದರಲ್ಲಿ ವಿಶೇಷ ಏನೂ ಇಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಭೇಟಿಯಾಗಿದ್ದೆವು. ದೆಹಲಿಗೆ ಬಂದಾಗ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುವುದು ಸಾಮಾನ್ಯ. ಅಲ್ಲಿಯೂ ಕೂಡ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆದಿಲ್ಲ. ಸಮಯ ಬಂದಾಗ ಹೈಕಮಾಂಡ್ ಸೂಕ್ತ ಬದಲಾವಣೆ ಮಾಡಲಿದೆ ಎಂದು ಹೇಳಿದರು.

Read More
Next Story