CM November Revolution, Siddaramaiah DKShivakumar AICC no one elses statement needed
x

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಚರ್ಚೆ, ʼನವೆಂಬರ್‌ ಕ್ರಾಂತಿʼ ಗುಸುಗುಸು: ಡಿಕೆಶಿ ಸಂದೇಶವೇನು?

"ಕಾಂಗ್ರೆಸ್‌ನಲ್ಲಿ ಎಲ್ಲರೂ ಒಮ್ಮತದಿಂದ ಇದ್ದ ಕಾರಣಕ್ಕೆ ಜನರು ನಮಗೆ ಸರ್ಕಾರ ರಚಿಸುವಷ್ಟು ಸ್ಥಾನ ನೀಡಿದ್ದಾರೆ. ಈಗಲೂ ಎಲ್ಲರೂ ಒಮ್ಮತದಿಂದಲೇ ಕೆಲಸ ನಿರ್ವಹಿಸುತ್ತಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ʼನವೆಂಬರ್‌ ಕ್ರಾಂತಿʼ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಸಂಬಂಧ ಸಿದ್ದರಾಮಯ್ಯ ಮತ್ತು ತಮ್ಮ ಮಾತುಗಳಷ್ಟೇ ಪ್ರಮುಖ ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.

ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಊಹಾಪೋಹ ಹರಿದಾಡುತ್ತಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು, ವಿರೋಧ ಪಕ್ಷಗಳ ನಾಯಕರು ಹಾಗೂ ರಾಜಕೀಯ ವಿಶ್ಲೇಷಕರು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನವೆಂಬರ್‌ ಕ್ರಾಂತಿ ಕುರಿತು ನಾನು ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ ಮಾತುಗಳು ಮಾತ್ರ ಮುಖ್ಯವಾಗಿದ್ದು, ಬೇರೆಯವರ ಹೇಳಿಕೆಗಳಿಗೆ ಕಿಮ್ಮತ್ತಿಲ್ಲ. ನಾಯಕತ್ವ ಬದಲಾವಣೆ ಕುರಿತು ಅನ್ಯರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಡಿ," ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಎಲ್ಲರೂ ಒಮ್ಮತದಿಂದ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಕಾಂಗ್ರೆಸ್‌ನಲ್ಲಿ ಎಲ್ಲರೂ ಒಮ್ಮತದಿಂದ ಇದ್ದ ಕಾರಣಕ್ಕೆ ಜನರು ನಮಗೆ ಸರ್ಕಾರ ರಚಿಸುವಷ್ಟು ಸ್ಥಾನ ನೀಡಿದ್ದಾರೆ. ಈಗಲೂ ಎಲ್ಲರೂ ಒಮ್ಮತದಿಂದಲೇ ಕೆಲಸ ನಿರ್ವಹಿಸುತ್ತಿದ್ದೇವೆ" ಎಂದು ಹೇಳಿದರು.

ಏನಿದು ನವೆಂಬರ್‌ ಕ್ರಾಂತಿ ಚರ್ಚೆ?

ಸರ್ಕಾರ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ಎಐಸಿಸಿ ಮಧ್ಯಸ್ಥಿಕೆಯಲ್ಲಿ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿದೆ ಎಂದು ಕಾಂಗ್ರೆಸ್‌ನ ಹಲವು ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೆಲ್ಲವೂ ಸುಳ್ಳು, ಅಧಿಕಾರದ ಹಂಚಿಕೆಯೇ ಆಗಿಲ್ಲ ಎಂದು ಹಲವು ಬಾರು ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರು ಹೇಳಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಡಿ.ಕೆ. ಶಿವಕುಮಾರ್‌ ಬಣದ ಶಾಸಕರು ಸರ್ಕಾರಕ್ಕೆ 2.5 ವರ್ಷವಾದ ನಂತರ ಡಿಕೆಶಿ ಸಿಎಂ ಆಗುತ್ತಾರೆ ಎಂದು ಹೇಳಿಕೆ ನೀಡುವ ಮೂಲಕ ನವೆಂಬರ್‌ ಕ್ರಾಂತಿಯ ಮುನ್ಸೂಚನೆ ನೀಡುತ್ತಲೇ ಇದ್ದಾರೆ.

ವರಸೆ ಬದಲಿಸಿದ ಸಿಎಂ

2025ನೇ ದಸರಾ ಉತ್ಸವದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, "2026ರ ಮೈಸೂರು ದಸರಾ ಮಹೋತ್ಸವಕ್ಕೂ ನಾನೇ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುತ್ತೇನೆ" ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ಚರ್ಚೆಗಳಿಗೆ ಪೂರ್ಣವಿರಾಮ ಹಾಕುವ ಪ್ರಯತ್ನ ಮಾಡಿದ್ದರು. ಈ ಹೇಳಿಕೆ ಮೂಲಕ, ತಾವು ನಿಗದಿತ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಸಿಎಂ ಆಗಲು ಶಾಸಕರ ಬೆಂಬಲವೂ ಅಗತ್ಯ ಎಂದು ಹೇಳುವ ಮೂಲಕ ಡಿಸಿಎಂ ಹಾಗೂ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದರು. ಆದರೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹೈಕಮಾಂಡ್‌ ಒಪ್ಪಿಗೆ ನೀಡಿದರೆ ಐದು ವರ್ಷ ನಾನೇ ಸಿಎಂ ಎಂದು ಹೇಳುವ ಮೂಲಕ ತಮ್ಮ ವರಸೆ ಬದಲಿಸಿದ್ದರು. ಇದು ರಾಜ್ಯ ರಾಜಕೀಯವಲಯದಲ್ಲಿ ಸಂಚಲನ ಮೂಡಿಸಿತ್ತಲದೇ, ಅಧಿಕಾರ ಹಂಚಿಕೆಯ ವಿಷಯವೂ ಮುನ್ನಲೆಗೆ ಬಂದಿತ್ತು.

ಎಲ್ಲಿ ಹೇಳಬೇಕೋ, ಅಲ್ಲೇ ಹೇಳುವೆ: ಡಿಸಿಎಂ

ಸರ್ಕಾರಕ್ಕೆ ನವೆಂಬರ್‌ 20ಕ್ಕೆ 2.5 ವರ್ಷ ತುಂಬುವ ವೇಳೆಯೇ ಸಿಎಂ ಪುತ್ರ ಯತೀಂದ್ರ ಸೇರಿದಂತೆ ಹಲವು ಸಚಿವರು ಕಾಂಗ್ರೆಸ್‌ಗೆ ಸಿಎಂ ಸಿದ್ದರಾಮಯ್ಯ ನಾಯಕತ್ವ ಅನಿವಾರ್ಯ, ನಾವು ಅವರನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದೆವು ಎಂದು ತಿಳಿಸಿದ್ದರು. ಸಿಎಂ ಆಪ್ತರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದ ಡಿಸಿಎಂ, "ನಾನು ಯಾರಿಗೆ ಹೇಳಬೇಕೋ ಅವರಿಗೆ ಹೇಳುತ್ತೇನೆʼʼ ಎನ್ನುವ ಮೂಲಕ ಹೈಕಮಾಂಡ್‌ಗೆ ವಿಷಯ ಮುಟ್ಟಿಸುತ್ತೇನೆ," ಎಂಬ ಸೂಚನೆ ನೀಡಿದ್ದರು.

ದಲಿತ ಸಿಎಂ ಮುನ್ನಲೆಗೆ

ನಾಯಕತ್ವ ಬದಲಾವಣೆ ವಿಷಯ ದಿನದಿಂದ ದಿನಕ್ಕೆ ಹೆಚ್ಚು ಮಹತ್ವ ಪಡೆಯುತ್ತಿರುವುದುರಿಂದ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ದಲಿತ ಸಿಎಂ ದಾಳ ಉರುಳಿಸಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ರಹಸ್ಯವಾಗಿ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್‌.ಸಿ. ಮಹದೇವಪ್ಪ ಹಾಗೂ ಆಹಾರ ಸರಬರಾಜು ಸಚಿವ ಕೆ.ಹೆಚ್‌. ಮುನಿಯಪ್ಪ ಅವರೊಂದಿಗೆ ರಹಸ್ಯ ಸಭೆ ನಡೆಸುವ ಮೂಲಕ ಹೈಕಮಾಂಡ್‌ ಹಾಗೂ ಡಿಕೆಶಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದನ್ನು ಗಮನಿಸಿಬಹುದಾಗಿದೆ.

Read More
Next Story