
ಪೊಲೀಸರು ವಶಪಡಿಸಿಕೊಂಡಿರುವ ಮಾದಕ ದ್ರವ್ಯವನ್ನು ಸಿಎಂ ಸಿದ್ದರಾಮಯ್ಯ ಪರಿಶೀಲಿಸಿದರು.
ಕ್ರಿಮಿನಲ್‌ಗಳೊಂದಿಗೆ ಪೊಲೀಸರ ಸಹವಾಸ ಸಲ್ಲ, ಸಿಎಂ ಸಲಹೆ
ದಕ್ಷಿಣ ಕನ್ನಡ ಜಿಲ್ಲೆ ಈ ಮೊದಲು ಕೋಮುಗಲಭೆ ಜಿಲ್ಲೆಯಾಗಿತ್ತು. ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಳಿಕ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಪೊಲೀಸರು ಮನಸ್ಸು ಮಾಡಿದರೆ ಅಪರಾಧ ತಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಜತೆ ಶಾಮೀಲಾಗಿರುತ್ತಾರೆ. ಕ್ಲಬ್ ನಡೆಸುವವರು ಹಾಗೂ ರೌಡಿಗಳು ಯಾರು ಎಂದು ಗೊತ್ತಿರುವುದಿಲ್ಲವೇ ? ಇಂತವರನ್ನು ಮೊಳಕೆಯಲ್ಲಿ ಚಿವುಟಿಹಾಕಬೇಕು. ಡ್ರಗ್ಸ್, ಕ್ರಿಮಿನಲ್‌ಗಳ ಜತೆ ಪೊಲೀಸರು ಸಂಬಂಧ ಇಟ್ಟುಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಈ ಮೊದಲು ಕೋಮುಗಲಭೆ ಜಿಲ್ಲೆಯಾಗಿತ್ತು. ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಳಿಕ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಪೊಲೀಸರು ಮನಸ್ಸು ಮಾಡಿದರೆ ಅಪರಾಧ ತಡೆಯಬಹುದು. ಡ್ರಗ್ಸ್ ಮುಕ್ತರಾಜ್ಯ ಮಾಡಿದರೆ ಉತ್ತಮ ಹೆಸರು ಬರಲಿದೆ ಎಂದರು.
ಪೊಲೀಸರನ್ನು ಕಂಡರೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಭಯ ಕಡಿಮೆಯಾಗಿದೆ. ಏಕೆ ಭಯ ಕಡಿಮೆಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಡ್ರಗ್ಸ್ ಮಾರಾಟ, ಹೊರದೇಶದಿಂದ ಡ್ರಗ್ಸ್ ಬರುವುದು, ರಾಜ್ಯದಲ್ಲಿ ಎಲ್ಲಿ ಡ್ರಗ್ಸ್ ಮಾರಾಟವಾಗಲಿದೆ ಎಂದು ಪೊಲೀಸರಿಗೆ ತಿಳಿದಿರುತ್ತದೆ. ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ಧ ನಿಲುವು ತಳೆಯಬೇಕು ಎಂದು ಸೂಚನೆ ನೀಡಿದರು.
ಸಿಎಂ, ಗೃಹಸಚಿವರಿಂದ ಗೊಂದಲದ ಹೇಳಿಕೆ
ಇಂಡಿಯಾ ಜಸ್ಟೀಸ್ ವರದಿಯ ಪ್ರಕಾರ ಕರ್ನಾಟಕದ ಪೊಲೀಸ್ ಪ್ರಥಮ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದರು. ನಂತರ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, ವರದಿಯ ಪ್ರಕಾರ ಕರ್ನಾಟಕದ ಪೊಲೀಸ್ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು. ಈ ವೇಳೆ ಪರಮೇಶ್ವರ್ ಇಲ್ಲ ಪ್ರಥಮ ಸ್ಥಾನದಲ್ಲಿದೆ ಎಂದರು. ನಾನೇ ತಪ್ಪು ಹೇಳಿದ್ದೇನಾ ಎಂದ ಸಿಎಂ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು. ಈ ವೇಲೆ ಕೆಲ ಕಾಲ ಗೊಂದಲ ಉಂಟಾಯಿತು.
ಇನ್ಮುಂದೆ ಕ್ಯಾಪ್ ಬದಲಾಗಲ್ಲ
ಪೊಲೀಸ್ ಕ್ಯಾಪ್ ಬದಲಾವಣೆ ಮಾಡಬೇಕೆಂಬುದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಇದೀಗ ನಾನು ನೂತನ ಪೊಲೀಸ್ ಕ್ಯಾಪ್ ಆಯ್ಕೆ ಮಾಡಿದ್ದೇನೆ. ಇದರಿಂದ ಪೊಲೀಸರು ಪ್ರಯಾಣಿಸುವಾಗ ಎಲ್ಲೆಡೆ ಸುಲಭವಾಗಿ ಕೊಂಡೊಯ್ಯಬಹುದು. ಸುಮಾರು 70 ವರ್ಷಗಳ ನಂತರ ಹಳೆಯ ಕ್ಯಾಪ್ ಬದಲಾಗಿದೆ. ಇನ್ನು ಮುಂದೆ ಬದಲಾಗುವುದಿಲ್ಲ ಎಂದು ತಿಳಿಸಿದರು.
ಏನಿದು ಇಂಡಿಯಾ ಜಸ್ಟೀಸ್ ವರದಿ ?
ಇಂಡಿಯಾ ಜಸ್ಟೀಸ್ ವರದಿಯ ನ್ಯಾಯ ವಿತರಣಾ ವ್ಯವಸ್ಥೆಯ ನಾಲ್ಕು ಪ್ರಮುಖ ಆಧಾರಸ್ತಂಭಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಹಾಗೂ ಕಾನೂನು ನೆರವಿನ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತದೆ.
ಮಾನವ ಸಂಪನ್ಮೂಲ, ನ್ಯಾಯಾಲಯಗಳು ಮತ್ತು ಕಾರಾಗೃಹಗಳ ಮೂಲಸೌಕರ್ಯ ಸೌಲಭ್ಯಗಳು, ಬಜೆಟ್ ಹಂಚಿಕೆ, ಕೆಲಸದ ಹೊರೆ, ಹಲವು ವಿಭಾಗಗಳಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಗಳ ಆಧಾರದ ಮೇಲೆ ಅಂಕ ನೀಡಲಾಗುತ್ತದೆ.
ಏಪ್ರಿಲ್ 2025 ರಲ್ಲಿ ಪ್ರಕಟಿಸಲಾದ ವರದಿಯ ಪ್ರಕಾರ ತಲಾ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕವು ನ್ಯಾಯ ವಿತರಣೆಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ನಂತರ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಸ್ಥಾನ ಪಡೆದಿವೆ. ಇಡೀ ದೇಶದಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಸಾಮಾನ್ಯವಾಗಿ ಕೊನೆಯ ಸ್ಥಾನಗಳಲ್ಲಿವೆ.

