ಬೆಂಗಳೂರಲ್ಲಿ ಸ್ವಚ್ಛತೆ, ಸೌಂದರ್ಯ ಕಾಪಾಡುವ ಉದ್ದೇಶದಿಂದ ಸ್ವಚ್ಛತಾ ಅಭಿಯಾನ
x

ಬೆಂಗಳೂರಲ್ಲಿ ಸ್ವಚ್ಛತೆ, ಸೌಂದರ್ಯ ಕಾಪಾಡುವ ಉದ್ದೇಶದಿಂದ ಸ್ವಚ್ಛತಾ ಅಭಿಯಾನ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ ಮುಕ್ತ ಪ್ರದೇಶವನ್ನಾಗಿ ಮಾಡುವ, ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಬೆಂಗಳೂರು ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನೇತೃತ್ವದಲ್ಲಿ ಹೆಬ್ಬಾಳ ವಿಭಾಗ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ವಾರ್ಡ್ ಸಂಖ್ಯೆ 18 ಡಾಲರ್ಸ್ ಕಾಲೋನಿ ಪೆಬಲಬೇ ಅಪಾರ್ಟ್‌ಮೆಂಟ್‌ನಿಂದ ಬುಲೆವಾಡ ಪಾರ್ಕ್‌ವರೆಗೆ 1.5 ಕಿ.ಮೀ ವ್ಯಾಪ್ತಿಯಲ್ಲಿ ನಡೆದ ಅಭಿಯಾನದಲ್ಲಿ ಒಟ್ಟು 40 ಪೌರಕಾರ್ಮಿಕರು, 2 ಟ್ರ್ಯಾಕ್ಟರ್‌ಗಳು ಹಾಗೂ ಮೂರು ಆಟೋ ಟಿಪ್ಪರ್, 1 ಕಾಂಪ್ಯಾಕ್ಟರ್ ಬಳಸಿ ಹೂಳು ಮತು ಕಸ ತೆರವು ಕಾರ್ಯಗಳು ಕೈಗೊಳ್ಳಲಾಯಿತು.

ಅಭಿಯಾನದ ಮೂಲಕ 2.5 ಟನ್ ತ್ಯಾಜ್ಯ ಹಾಗೂ 1.5 ಟನ್ ಕಟ್ಟಡ ಭಗ್ನಾವಶೇಷಗಳು ಸೇರಿ ಒಟ್ಟು 4 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ನಗರದ ಸ್ವಚ್ಛತೆ ಕಾಪಾಡುವ ಸಲುವಾಗಿ ಗೋಡೆಗೆ ಬಣ್ಣ ಹಚ್ಚುವುದರ ಮೂಲಕ ಬ್ಲಾಕ್ ಸ್ಪಾಟ್ ಗಳ ನಿವಾರಣೆಗೆ ಕ್ರಮ ವಹಿಸಲಾಯಿತು. ಈ ಸಂದರ್ಭದಲ್ಲಿ ಆಯುಕ್ತ ಪೊಮ್ಮಲ ಸುನೀಲ್‌ ಕುಮಾರ್‌, ಪ್ರತಿದಿನವೂ ನಗರ ಪಾಲಿಕೆಯ ಸಿಬ್ಬಂದಿ ತಂಡ ಸ್ವಚ್ಛತೆ ಕಾಪಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಸಹ ಸಿಬ್ಬಂದಿಗಳೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ

ಬೆಂಗಳೂರು ನಗರದಲ್ಲಿನ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಆದೇಶ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನೀಡಿದ ನಿರ್ದೇಶನದ ಮೇರೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆ ಮುಂಭಾಗದ ರಸ್ತೆ, ಮಿಷನ್ ರಸ್ತೆ, ಕೆ.ಜಿ. ರಸ್ತೆ, ಜಯಮಹಲ್ ರಸ್ತೆ, ರಿಚ್ಮಂಡ್ ರಸ್ತೆ, ಕಾಕ್ ಬರ್ನ್ ರಸ್ತೆ, ಹೆಚ್.ಕೆ.ಪಿ. ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಅಲಿ ಆಸ್ಕರ್ ರಸ್ತೆ, ಡಿಕೆನ್ಸನ್ ರಸ್ತೆ, ಕುಮಾರ ಕೃಪಾ ರಸ್ತೆ, ಮೈಸೂರು ರಸ್ತೆ, ಸುಂಕೇನಹಳ್ಳಿ, ಗವಿಪುರಂ ರಸ್ತೆ, ಬಸವನಗುಡಿ ರಸ್ತೆ, ಗಾಂಧಿ ಬಜಾರ್ ಸುತ್ತಮುತ್ತಲಿನ ರಸ್ತೆ, ಜೀವನ್ ಭೀಮಾ ನಗರದ ಜಿ.ಎಂ. ಪಾಳ್ಯ ಸುತ್ತಮುತ್ತಲಿನ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ರಸ್ತೆಗಳ ಅಭಿವೃಧ್ಧಿಗೆ ಕ್ರಮ ವಹಿಸಲಾಗಿದೆ.

ಇದೇ ವೇಳೆ ಸಾಮೂಹಿಕ ಸ್ವಚ್ಛತೆ ಕಾರ್ಯದ ಸಂದರ್ಭದಲ್ಲಿ ರಸ್ತೆ ಬದಿಗಳಲ್ಲಿ ಪಾದಚಾರಿಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಪೆಟ್ಟಿ ಅಂಗಡಿಗಳನ್ನು, ಇನ್ನಿತರೆ ರೀತಿಯ ಒತ್ತುವರಿಗಳನ್ನು ಸ್ಥಳೀಯ ಪೊಲೀಸರ ನೆರವಿನಿಂದ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ನಡೆಸುತ್ತಿರುವ ಸ್ಥಳ ತಪಾಸಣೆಗಳ ಫಲವಾಗಿ ಹಾಳಾದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

Read More
Next Story