
ಅನಿರುಧ್
ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋ: ಸ್ವಚ್ಛತಾ ಕ್ರಾಂತಿಗೆ ಕೈಜೋಡಿಸಿದ ನಟ ಅನಿರುದ್ಧ್
ಬೆಂಗಳೂರು ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾದರೂ ಕಸದ ರಾಶಿ ಕಂಡುಬಂದರೆ, ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತಾರೆ.
ಖ್ಯಾತ ನಟ ಮತ್ತು 'ಕರ್ನಾಟಕ ರತ್ನ' ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಜಟ್ಕರ್, ಕಿರುತೆರೆಯ 'ಜೊತೆಜೊತೆಯಲಿ' ಧಾರಾವಾಹಿಯ ಮೂಲಕ ಮನೆಮಾತಾದವರು. ಆದರೆ, ಅವರ ಕೀರ್ತಿ ಕೇವಲ ನಟನೆಗೆ ಸೀಮಿತವಾಗಿಲ್ಲ; ಅವರು ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸ್ವಚ್ಛತಾ ಅಭಿಯಾನಗಳ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಕಸದ ರಾಶಿ ಕಂಡರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಎಚ್ಚರಿಸಿ, ಆ ಜಾಗವನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಜೊತೆಜೊತೆಯಲಿ ಧಾರಾವಾಹಿ ಸ್ಪೂರ್ತಿ
'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ಅನಿರುದ್ಧ್ ತಮ್ಮ ಸಾಮಾಜಿಕ ಕಳಕಳಿಯ ಹಿಂದಿನ ಪ್ರೇರಣೆಯನ್ನು ಹಂಚಿಕೊಂಡಿದ್ದಾರೆ. "ನಮ್ಮ ದೇಶ ಸುಂದರವಾಗಿ, ಸ್ವಚ್ಛವಾಗಿರಬೇಕು ಎಂಬುದು ನನ್ನ ಬಾಲ್ಯದ ಕನಸು. ವಿದೇಶಿ ಸಿನಿಮಾಗಳಲ್ಲಿನ ಸ್ವಚ್ಛತೆಯನ್ನು ನೋಡಿ, ನಮ್ಮ ದೇಶವೇಕೆ ಹೀಗಿರಬಾರದು ಎಂದು ಯೋಚಿಸುತ್ತಿದ್ದೆ. ಭಾರತದಲ್ಲಿ ಎಲ್ಲ ಬಗೆಯ ನೈಸರ್ಗಿಕ ಸಂಪತ್ತು ಇದ್ದರೂ ಸ್ವಚ್ಛತೆಯ ಕೊರತೆ ಕಾಡುತ್ತಿತ್ತು," ಎಂದು ಹೇಳಿದ್ದಾರೆ.
ಈ ಆಲೋಚನೆಗೆ ಮೂರ್ತ ರೂಪ ಸಿಕ್ಕಿದ್ದು 'ಜೊತೆಜೊತೆಯಲಿ' ಧಾರಾವಾಹಿಯಿಂದ. ಕಸ ವಿಲೇವಾರಿ ಕುರಿತಾದ ಒಂದು ಸಂಚಿಕೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಂದು ದಿನ ಚಿತ್ರೀಕರಣ ಮುಗಿಸಿ ಬರುವಾಗ ರಸ್ತೆಯಲ್ಲಿದ್ದ ಕಸದ ರಾಶಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಇದನ್ನು ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ತಕ್ಷಣ ಸ್ಥಳವನ್ನು ಸ್ವಚ್ಛಗೊಳಿಸಿದ್ದಲ್ಲದೆ, ತಮ್ಮ ಸಿಬ್ಬಂದಿಯನ್ನು ಅನಿರುದ್ಧ್ ಅವರ ಮನೆಗೆ ಕಳುಹಿಸಿ ಮಾಹಿತಿ ನೀಡಿದರು. "ಅಂದಿನಿಂದ ಇಂದಿನವರೆಗೂ ಎಲ್ಲೇ ಕಸ ಕಂಡರೂ, ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಸ್ವಚ್ಛಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ," ಎಂದು ಅವರು ವಿವರಿಸಿದರು.
ತುಂಗಾ ನದಿ ಸ್ವಚ್ಛತೆಗೆ ಸಿಎಂಗೆ ಮನವಿ
ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ, ಪತ್ರಕರ್ತರೊಬ್ಬರು "ಇಲ್ಲಿ ಸ್ವಚ್ಛತಾ ಅಭಿಯಾನ ಮಾಡುವುದಿಲ್ಲವೇ?" ಎಂದು ಪ್ರಶ್ನಿಸಿದ್ದರು. ಆಗಲೇ ಅವರಿಗೆ ತುಂಗಾ ನದಿಯ ಮಾಲಿನ್ಯದ ಗಂಭೀರತೆ ಅರಿವಾಗಿದ್ದು. ತಕ್ಷಣವೇ ಈ ಕುರಿತು ವಿಡಿಯೋ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ನೀರಾವರಿ ನಿಗಮಕ್ಕೆ ಕರೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದರು. "ನಂತರ, ನಾನು ನೀರಾವರಿ ನಿಗಮ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ನದಿ ಸ್ವಚ್ಛತೆಗಾಗಿ ಸಮಿತಿಯೊಂದು ರಚನೆಯಾಗಿದೆ. ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ" ಎಂದು ಅನಿರುದ್ಧ್ ತಿಳಿಸಿದರು.
ನಮ್ಮ ಊರು, ನಮ್ಮ ದೇಶ ಎಂಬ ಭಾವನೆ ಇರಬೇಕು
"ಇದು ನಮ್ಮ ಬಡಾವಣೆ, ನಮ್ಮ ಊರು, ನಮ್ಮ ದೇಶ ಎಂಬ ಮಾಲೀಕತ್ವದ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ," ಎನ್ನುವುದು ಅನಿರುದ್ಧ್ ಅವರ ಅಭಿಪ್ರಾಯ. "ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗುವಂತಹ ಉತ್ತಮ ವಾತಾವರಣವನ್ನು ನಾವು ನಿರ್ಮಿಸಬೇಕು. ನಮ್ಮ ಅಧಿಕಾರಿಗಳು ಪ್ರತಿಭಾವಂತರು; ಅವರಿಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿದೆ. ಒಂದು ವೇಳೆ ತಾಂತ್ರಿಕ ನೆರವಿನ ಅಗತ್ಯವಿದ್ದರೆ, ವಿದೇಶಿ ಸಂಸ್ಥೆಗಳ ಸಹಾಯ ಪಡೆದು, ಅವರೊಂದಿಗೆ ಕೆಲಸ ಮಾಡಿ ಕಲಿಯುವುದರಲ್ಲಿ ತಪ್ಪೇನಿಲ್ಲ. ಕೇವಲ ದೂರುವುದು ಅಥವಾ ಬೆರಳು ತೋರಿಸುವುದನ್ನು ಬಿಟ್ಟು, ನಾವೆಲ್ಲರೂ ಅಧಿಕಾರಿಗಳೊಂದಿಗೆ ಕೈಜೋಡಿಸಿ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಬೇಕು," ಎಂದು ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.