Mysore MUDA Case | ಸಿಎಂಗೆ ಕ್ಲೀನ್‌ಚಿಟ್‌; ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಲೋಕಾಯುಕ್ತ
x
ಸಿದ್ದರಾಮಯ್ಯ

Mysore MUDA Case | ಸಿಎಂಗೆ ಕ್ಲೀನ್‌ಚಿಟ್‌; ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ ಲೋಕಾಯುಕ್ತ

ಬೆಂಗಳೂರಿನ 82ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್ ಅವರಿಗೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ 11 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿದರು.


ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿ ನಾಲ್ವರ ವಿರುದ್ಧದ ತನಿಖೆಯ ಅಂತಿಮ ವರದಿಯನ್ನು ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಅವರು ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಬೆಂಗಳೂರಿನ 82ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿದ್ದು, ಒಟ್ಟು 27 ಸಂಪುಟಗಳ ವರದಿ ಸ್ವೀಕರಿಸಿದ ನ್ಯಾಯಾಲಯವು ಫೆ.24 ಕ್ಕೆ ವಿಚಾರಣೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬಿ-ರಿಪೋರ್ಟ್ ಸಲ್ಲಿಸುತ್ತಿರುವುದಾಗಿ ಲೋಕಾಯುಕ್ತ ಪೊಲೀಸರು ಬುಧವಾರವಷ್ಟೇ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿದ್ದ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು.

ತನಿಖೆಯ ವೇಳೆ ಲೋಕಾಯುಕ್ತ ಪೊಲೀಸರು 50ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ, ಆರೋಪ ದೃಢೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಹಾಗಾಗಿ ಇದು ತನಿಖೆಗೆ ಅರ್ಹವಲ್ಲದ ಪ್ರಕರಣ ಎಂಬ ತೀರ್ಮಾನಕ್ಕೆ ಬಂದು ಬಿ ರಿಪೋರ್ಟ್‌ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಜಮೀನು ಮಾಲೀಕ ದೇವರಾಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೋರಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು 550 ಪುಟಗಳ ಮಧ್ಯಂತರ ತನಿಖಾ ವರದಿಯನ್ನು ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ಸಲ್ಲಿಸಿದ್ದರು. ಇದರ ಪರಿಶೀಲನೆ ನಡೆಯುತ್ತಿದೆ.

ಹೆಚ್ಚುವರಿ ಅಂತಿಮ ವರದಿ ಸಲ್ಲಿಕೆ

ಮುಡಾ ಪ್ರಕರಣದಲ್ಲಿ 2016 ರಿಂದ 2024ರವರೆಗೆ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಪರಿಹಾರಾತ್ಮಕ ನಿವೇಶನಗಳ ಆರೋಪದ ಬಗ್ಗೆ ಕಲಂ 173(8) ಸಿಆರ್ಪಿಸಿ ಅನ್ವಯ ಹೆಚ್ಚುವರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹೆಚ್ಚುವರಿ ಅಂತಿಮ ವರದಿ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

Read More
Next Story