ಎಸ್‌ಎಸ್‌ಎಲ್‌ಸಿ, 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಸುಸೂತ್ರ| ಪೋಷಕರು ನಿರಾಳ
x
ಪರೀಕ್ಷಾ ಕೇಂದ್ರದ ಒಳಗೆ ಹೋಗುತ್ತಿರುವ ವಿದ್ಯಾರ್ಥಿ

ಎಸ್‌ಎಸ್‌ಎಲ್‌ಸಿ, 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಸುಸೂತ್ರ| ಪೋಷಕರು ನಿರಾಳ

ಇಂದಿನಿಂದ (ಮಾ.25) ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಮತ್ತು 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿದ್ದ ಬೋರ್ಡ್ ಪರೀಕ್ಷೆ ಪ್ರಾರಂಭವಾಗಿದೆ.


ಇಂದಿನಿಂದ (ಮಾ. 25) ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಆರಂಭವಾಗಿದೆ. 5, 8 ಹಾಗೂ 9ನೇ ತರಗತಿಯ ಬಾಕಿ ಬೋರ್ಡ್ ಪರೀಕ್ಷೆಗಳು ಕೂಡ ಪ್ರಾರಂಭವಾಗಿವೆ.

ಪೂರ್ವ ನಿಗದಿಯಂತೆ 8.69 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಎಸ್ಎಸ್ಎಲ್‌ಸಿ ಪರೀಕ್ಷೆ ಹಾಗೂ 5,8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುತೇಕ ಮೊದಲ ಬಾರಿ ಒಂದೇ ದಿನ ಪರೀಕ್ಷೆ ನಡೆಯುತ್ತಿದೆ. ಸೋಮವಾರ ಬೆಳಿಗ್ಗೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಪ್ರಥಮ ಭಾಷೆ ವಿಷಯ ಪರೀಕ್ಷೆ ಬರೆದಿದ್ದು, ಮಧ್ಯಾಹ್ನ 2 ಗಂಟೆಯ ನಂತರ 5ನೇ ತರಗತಿ ವಿದ್ಯಾರ್ಥಿಗಳು ಪರಿಸರ ಅಧ್ಯಯನ, 8ನೇ ತರಗತಿ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ಬರೆದಿದ್ದಾರೆ.

ಆತಂಕ ಮತ್ತು ನಿರಾಳತೆಗೆ ಸಾಕ್ಷಿಯಾದ ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು ಸೋಮವಾರ ಆತಂಕ ಹಾಗೂ ನಿರಾಳತೆಗೆ ಸಾಕ್ಷಿಯಾಗಿದ್ದು ಕಂಡು ಬಂತು. 5, 8 ಹಾಗೂ 9ನೇ ತರಗತಿಯ ಬೋರ್ಡ್ ಪರೀಕ್ಷೆ ಹಲವು ಗೊಂದಲಗಳಿಂದಾಗಿ ಮುಂದೂಡಿಕೆಯಾಗುತ್ತಿತ್ತು. ಇದೀಗ ಸೋಮವಾರದಿಂದ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಬಿಟ್ಟು ಹೋಗಲು ಬಂದ ಪೋಷಕರ ಕಣ್ಣಲ್ಲಿ ಆತಂಕ ಮತ್ತು ನಿರಾಳತೆ ಎರಡೂ ಕಾಣಿಸಿತು. ಹಲವು ಪೋಷಕರು 5, 8 ಹಾಗೂ 9ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಸವಾಲು

“ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಸವಾಲಿನ ಕೆಲಸ” ಎಂದು 5ನೇ ತರಗತಿ ವಿದ್ಯಾರ್ಥಿಯ ಪೋಷಕರಾದ ವಿನೋದ್ ಹೇಳಿದರು.

“5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ವಿಚಾರದಲ್ಲಿ ಗೊಂದಲಗಳು ಮುಂದುವರಿದಿದೆ. ನನ್ನ ಮಗ 5ನೇ ತರಗತಿಯಲ್ಲಿ ಓದುತ್ತಿದ್ದು, ಕೂರಿಸಿ ಓದಿಸುವುದೇ ಸವಾಲಿನ ಕೆಲಸ. 10ನೇ ತರಗತಿಯ ವಿದ್ಯಾರ್ಥಿಗಳಿಗಾದರೆ, ಒಮ್ಮೆ ಹೇಳಿದರೆ ಓದುತ್ತಾರೆ. ಆದರೆ, ಸಣ್ಣ ಮಕ್ಕನ್ನು ಓದಿಸುವುದು ಕಷ್ಟದ ಕೆಲಸ. ಅಪ್ಪ ನನ್ನ ಪರೀಕ್ಷೆ ಯಾವಾಗ ಅಂತ ಮಗು ಕೇಳಿದರೆ, ಉತ್ತರಿಸಲು ಆಗುತ್ತಿರಲಿಲ್ಲ. ಬೋರ್ಡ್ ಪರೀಕ್ಷೆ ಒತ್ತಡ ಎನ್ನುವುದಕ್ಕಿಂತ ಈ ರೀತಿಯ ಗೊಂದಲಗಳು ಮಕ್ಕಳನ್ನು ಒತ್ತಡಕ್ಕೆ ದೂಡಿವೆ. ಇಂದಿನಿಂದ ಪರೀಕ್ಷೆ ನಡೆಯುತ್ತಿರುವುದರಿಂದ ನಿರಾಳ ಎನಿಸಿದೆ” ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.


ಎರಡು ವರ್ಷಗಳಿಂದ ಇದೇ ಸಮಸ್ಯೆ

“5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುವ ವಿಚಾರ ಕಳೆದ ಎರಡು ವರ್ಷಗಳಿಂದ ಗೊಂದಲದ ಗೂಡಾಗಿದೆ. ಕಳೆದ ಬಾರಿ ಹಾಗೂ ಈ ಬಾರಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ವಿಚಾರದಲ್ಲಿ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳದೆ, ಪೋಷಕರು ಹಾಗೂ ಮಕ್ಕಳನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ” ಎಂದು ವರಲಕ್ಷ್ಮೀ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದರು.

“ಬೋರ್ಡ್ ಪರೀಕ್ಷೆ ಇದೆ ಎಂದು ಅವಧಿಗೂ ಮುನ್ನವೇ ಪಾಠಗಳನ್ನು ಮುಗಿಸುತ್ತಾರೆ. ಇನ್ನೂ ಕೆಲವೊಮ್ಮೆ ಪೂರ್ತಿ ಪಾಠಗಳನ್ನೇ ಮಾಡುವುದಿಲ್ಲ. ಈ ಗೊಂದಲಗಳು ಮುಗಿಯುವಷ್ಟರಲ್ಲಿ ಪರೀಕ್ಷಾ ದಿನಾಂಕದ ಗೊಂದಲ ಸೃಷ್ಟಿಯಾಗುತ್ತದೆ. ಪರೀಕ್ಷೆಗಳನ್ನು ಮುಂದೂಡುವುದು; ಇಲ್ಲವೇ ಪರೀಕ್ಷೆ ನಿಗದಿತ ದಿನಕ್ಕಿಂತ ಹಿಂದಿನ ದಿನ ನಿಗದಿ ಮಾಡುವುದು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಇದನ್ನು ಯಾವ ರೀತಿ ನಿಭಾಯಿಸಬೇಕು ಎಂದು ನಮಗೂ ತಿಳಿಯುತ್ತಿಲ್ಲ. ಈ ರೀತಿ ಮಾಡುವುದರಿಂದ ಮಕ್ಕಳಿಗೆ ಓದುವುದಕ್ಕೂ ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನವರಿ ಒಳಗೆ ಸೂಕ್ತ ನಿರ್ಧಾರಕ್ಕೆ ಬರಲಿ

"ಸರ್ಕಾರ ಹಾಗೂ ಪರೀಕ್ಷಾ ಮಂಡಳಿ ಪ್ರತಿ ವರ್ಷ ಜನವರಿಯ ಒಳಗಾಗಿ ಸೂಕ್ತ ತೀರ್ಮಾನಕ್ಕೆ ಬರಬೇಕು" ಎಂದು ವರಲಕ್ಷ್ಮೀ ಅವರು ಆಗ್ರಹಿಸಿದರು.

“ಬೋರ್ಡ್ ಪರೀಕ್ಷೆ ನಡೆಸುವ ವಿಚಾರದ ಬಗ್ಗೆ ಡಿಸೆಂಬರ್ ಅಥವಾ ಜನವರಿಯಲ್ಲೇ ಸೂಕ್ತ ನಿರ್ಧಾರಕ್ಕೆ ಬರಬೇಕು. ಪರೀಕ್ಷಾ ದಿನಾಂಕ ನಿಗದಿಯಾದ ಮೇಲೆ ಅದನ್ನು ಬದಲಾಯಿಸಬಾರದು. ಸರ್ಕಾರ, ಮಕ್ಕಳು ಪರೀಕ್ಷೆ ಬರೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ಅಡೆತಡೆಗಳನ್ನು ಸೃಷ್ಟಿಸಬಾರದು” ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಮಕ್ಕಳು, ಪೋಷಕರಿಗೂ ಆಲ್ ದಿ ಬೆಸ್ಟ್!

“ಫಲಿತಾಂಶದ ಬಗ್ಗೆ ವಿಚಾರ ಮಾಡಿ ಪರೀಕ್ಷೆ ಬರೆದರೆ, ಭಯದ ವಾತಾವರಣ ನಿರ್ಮಾಣ ಆಗಲಿದೆ. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಹೇಗೆ ಕೇಳುತ್ತಾರೆ, ಕಠಿಣವಾಗಿರಲಿದೆಯೇ, ಫಲಿತಾಂಶ ಯಾವ ರೀತಿ ಬರುತ್ತೆ ಎನ್ನುವ ಹಲವು ಪ್ರಶ್ನೆಗಳು ಮೂಡಬಹುದು. ನಾನು ವಿದ್ಯಾರ್ಥಿಯಾಗಿ ಚೆನ್ನಾಗಿ ಓದಿದ್ದೇನೆ, ಉತ್ತಮವಾಗಿ ಪರೀಕ್ಷೆ ಬರೆಯುತ್ತೇನೆ ಎನ್ನುವ ವಿಶ್ವಾಸದಿಂದ ಮಕ್ಕಳು ಪರೀಕ್ಷೆ ಬರೆಯಬೇಕು" ಎಂದು ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

“ಇನ್ನು ಮಕ್ಕಳಿಗೆ ಪರೀಕ್ಷೆ ಎಂದರೆ, ಪೋಷಕರಿಗೂ ಪರೀಕ್ಷಾ ಸಮಯವೇ ಆಗಿದೆ. ಹೀಗಾಗಿ, ಪೋಷಕರೂ ಪರೀಕ್ಷೆ ಸಮಯದಲ್ಲಿ ತಾಳ್ಮೆಯಿಂದ ವರ್ತಿಸಬೇಕು. ಪೋಷಕರು ಆತಂಕಕ್ಕೆ ಒಳಗಾಗದೆ, ಶಾಂತವಾಗಿ ವರ್ತಿಸಬೇಕು. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೂ ಆಲ್ ದಿ ಬೆಸ್ಟ್” ಎಂದರು.

ಬೋರ್ಡ್ ಪರೀಕ್ಷೆ: ಭಯ ಬೇಡ; ಧೈರ್ಯ ತುಂಬಿ

ಮಕ್ಕಳಿಗೆ ಬೋರ್ಡ್ ಪರೀಕ್ಷೆ ಇದೆ ಓದಿ ಎಂದು ಹೇಳುವುದಕ್ಕಿಂತ ಸಮಾನ್ಯ ಪರೀಕ್ಷೆಗೆ ಸಿದ್ಧತೆ ಮಾಡುವ ರೀತಿಯಲ್ಲೇ ಓದಿಸಿ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಮೈಸೂರು) ಪ್ರೊ. ಡಾ.ಸಂತೋಷ್ ನಾಯಕ್ ತಿಳಿಸಿದರು.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಸಾಮಾನ್ಯ ಪರೀಕ್ಷೆಗೆ ಓದುವಂತೆ ಮಕ್ಕಳು ಓದುವುದರಿಂದ ಮಕ್ಕಳಿಗೆ ಅರ್ಧ ಭಯ ಕಡಿಮೆ ಆಗಲಿದೆ. 5, 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳು ಅನುತ್ತೀರ್ಣವಾಗುವ ಸಾಧ್ಯತೆ ಇಲ್ಲ. ಆದರೆ, ಮಕ್ಕಳು ಚೆನ್ನಾಗಿ ಪರೀಕ್ಷೆ ಬರೆಯುವಂತೆ ಮಾಡಲು ಅವರಲ್ಲಿ ಏಕಾಗ್ರತೆ ಮೂಡಿಸಬೇಕು. ಈಗ ಕ್ರಿಕೆಟ್, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಬೋರ್ಡ್ ಪರೀಕ್ಷೆ ಎಂದು ಭಯ ಸೃಷ್ಟಿಸುವ ಬದಲು, ಮಕ್ಕಳನ್ನು ಪರೀಕ್ಷೆಗೆ ತಯಾರಿ ಮಾಡಬೇಕು” ಎಂದು ಹೇಳಿದರು.

ಒತ್ತಡದ ವಾತಾವರಣ ಇರುವುದಿಲ್ಲ

“5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಯುತ್ತಿದೆ. ಮಕ್ಕಳು ಆತಂಕ ಹಾಗೂ ಒತ್ತಡಕ್ಕೆ ಒಳಗಾಗದಂತೆ ಶಿಕ್ಷಕರು ಸಹ ಎಚ್ಚರಿಕೆ ವಹಿಸುತ್ತಿದ್ದೇವೆ” ಎಂದು ಜಿ.ಎನ್ ತಾಂಡ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ದಕ್ಷಿಣ ಮೂರ್ತಿ ಎಚ್.ಆರ್ ತಿಳಿಸಿದರು.

“5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯಾ ಶಾಲೆಯನ್ನೇ ಪರೀಕ್ಷಾ ಕೇಂದ್ರವನ್ನಾಗಿ ನಿಗದಿ ಮಾಡಲಾಗಿರುತ್ತದೆ. ಆದರೆ, ಮೇಲ್ವಿಚಾರಕ (ಶಿಕ್ಷಕ ಅಥವಾ ಶಿಕ್ಷಕಿ)ಕರು ಮಾತ್ರ ಮತ್ತೊಂದು ಶಾಲೆಯವರಾಗಿರುತ್ತಾರೆ. ಹೀಗಾಗಿ, ಮಕ್ಕಳಿಗೆ ಪರೀಕ್ಷೆ ಬರೆಯುವಾಗ ಸಣ್ಣ ಆತಂಕ ಮೂಡುವ ಸಾಧ್ಯತೆ ಇದೆ. ಆದರೆ, ಮಕ್ಕಳು ಒತ್ತಡಕ್ಕೆ ಒಳಗಾಗದಂತೆ ಶಿಕ್ಷಕರು ಸಹ ಎಚ್ಚರಿಕೆ ವಹಿಸುತ್ತಿದ್ದೇವೆ” ಎಂದು ತಿಳಿಸಿದರು.

Read More
Next Story