
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿರು ಜನಸಂದಣಿ
ಹಬ್ಬದ ಬಳಿಕ ಬೆಂಗಳೂರಿಗೆ ಮರಳಿದ ಜನಸಾಗರ: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವಾಹ!
ದೀಪಾವಳಿ ಹಬ್ಬಕ್ಕಾಗಿ ಕಳೆದ ಶುಕ್ರವಾರ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಜನರು, ಈಗ ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಗೆ ಜನರು ಆಗಮಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಡಗರ ಮುಗಿಸಿ, ಸಾಲು ಸಾಲು ರಜೆಗಳ ನಂತರ ಲಕ್ಷಾಂತರ ಜನರು ರಾಜಧಾನಿ ಬೆಂಗಳೂರಿಗೆ ಮರಳುತ್ತಿದ್ದಾರೆ. ಇದರ ಪರಿಣಾಮವಾಗಿ, ನಗರದ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್, ಗುರುವಾರ ಜನಸಾಗರದಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ, ನಗರದ ಬೇರೆ ಬೇರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ದೀಪಾವಳಿ ಹಬ್ಬಕ್ಕಾಗಿ ಕಳೆದ ಶುಕ್ರವಾರ ತಮ್ಮ ತಮ್ಮ ಊರುಗಳಿಗೆ ತೆರಳಿದ್ದ ಜನರು, ಈಗ ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಗೆ ಆಗಮಿಸುತ್ತಿರುವ ಜನರು, ಅಲ್ಲಿಂದ ತಮ್ಮ ಮನೆಗಳಿಗೆ ಅಥವಾ ಕೆಲಸದ ಸ್ಥಳಗಳಿಗೆ ತೆರಳಲು ಮೆಟ್ರೋವನ್ನು ಅವಲಂಬಿಸಿದ್ದಾರೆ. ಈ ಕಾರಣದಿಂದ, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೇ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.
ನಿಲ್ದಾಣದ ಒಳಗೆ, ಟಿಕೆಟ್ ಕೌಂಟರ್‌ಗಳು ಮತ್ತು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡುವ ಸ್ಥಳಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು. ಭದ್ರತಾ ತಪಾಸಣೆಯ ಗೇಟ್‌ಗಳಲ್ಲಿಯೂ ಜನಜಂಗುಳಿ ಹೆಚ್ಚಾಗಿದ್ದು, ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಪ್ಲಾಟ್‌ಫಾರ್ಮ್‌ಗಳು ಲಗೇಜ್‌ಗಳೊಂದಿಗೆ ನಿಂತ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದವು.
ಬರುತ್ತಿದ್ದ ಪ್ರತಿಯೊಂದು ಮೆಟ್ರೋ ರೈಲು ಕೂಡ ಸಂಪೂರ್ಣವಾಗಿ ಭರ್ತಿಯಾಗಿದ್ದು, ಒಳಗೆ ಕಾಲಿಡಲೂ ಜಾಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಯಾಣಿಕರು ಪರಸ್ಪರ ಒತ್ತಿಕೊಂಡು ನಿಂತು ಪ್ರಯಾಣಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಮೆಜೆಸ್ಟಿಕ್‌ನಿಂದ ನಗರದ ನಾಲ್ಕೂ ದಿಕ್ಕುಗಳಿಗೆ ತೆರಳುವ ನೇರಳೆ ಮತ್ತು ಹಸಿರು ಮಾರ್ಗದ ಎರಡೂ ರೈಲುಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.