CAA Notification | ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರು ಏನಂತಾರೆ?
ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಪ್ರತಿಭಟನೆಗಳ ಅಲೆ ಎಬ್ಬಿಸಿದ ಸಿಎಎ ಇದೀಗ ಚುನಾವಣಾ ಹೊತ್ತಲ್ಲಿ ಮತ್ತೆ ಸದ್ದು ಮಾಡತೊಡಗಿದೆ.
ಚುನಾವಣಾ ಬಾಂಡ್ ಕುರಿತು ದೇಶಾದ್ಯಂತ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿರುವಾಗಲೇ ಸಂಸತ್ ಅಂಗೀಕಾರದ ನಾಲ್ಕು ವರ್ಷಗಳ ನಂತರ ಬಹು ವಿವಾದಿತ ಸಿಎಎ ಕಾಯ್ದೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಸಿಎಎ ಜಾರಿಯಾಗಲು ಬಿಡುವುದಿಲ್ಲ ಎಂದು ಈಗಾಗಲೇ ಘೋಷಿಸಿವೆ.
ಸಿಎಎ- ವಿವಾದ ಏಕೆ?
ಪೌರತ್ವ ಕಾಯ್ದೆ-1955ನ್ನು ತಿದ್ದುಪಡಿ ಮಾಡಿ ಪೌರತ್ವ (ತಿದ್ದುಪಡಿ) ಮಸೂದೆ-2019ನ್ನು ಡಿಸೆಂಬರ್ 11, 2019ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯು ವಿದೇಶಿ ಅಕ್ರಮ ವಲಸಿಗರಿಗೆ ಧರ್ಮದ ಆಧಾರದಲ್ಲಿ ಭಾರತೀಯ ಪೌರತ್ವ ನೀಡುವ ಅವಕಾಶ ನೀಡಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು.
ಸಿಎಎ ಕಾಯ್ದೆಯಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಅಕ್ರಮ ವಲಸಿಗರು ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಅವರಿಗೆ ಪೌರತ್ವವನ್ನು ನೀಡಬಹುದು. ಮುಸ್ಲಿಮರಿಗೆ ಮಾತ್ರ ಆ ಅವಕಾಶ ನೀಡಲಾಗಿಲ್ಲ. ಹಾಗಾಗಿ ಹೀಗೆ ಧರ್ಮದ ಆಧಾರದಲ್ಲಿ ಕಾನೂನು ತರುವುದು ಸಂವಿಧಾನ ಬಾಹಿರವಾಗಿದ್ದು, ಈ ಕಾನೂನನ್ನು ಹಿಂಪಡೆಯಬೇಕೆಂಬುದು ಸಿಎಎ ವಿರೋಧಿಗಳ ಒತ್ತಾಯ.
ದೇಶಾದ್ಯಂತ ಪ್ರತಿಭಟನೆ ಕಿಚ್ಚು ಹಚ್ಚಿದ್ದ ಸಿಎಎ
ಕರ್ನಾಟಕ ಸೇರಿದಂತೆ ದೇಶಾದ್ಯಂತ 2019 ಮತ್ತು 2020 ರ ಆರಂಭಿಕ ತಿಂಗಳುಗಳಲ್ಲಿ ಸಿಎಎ-ಎನ್‌ಆರ್‌ಸಿ ಹೋರಾಟ ತೀವ್ರ ಕಾವು ಪಡೆದುಕೊಂಡಿದ್ದು, ಸುದೀರ್ಘ ಪ್ರತಿಭಟನೆಗಳಿಗೆ ದೇಶ ಸಾಕ್ಷಿಯಾಗಿತ್ತು. 2020 ರ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಹೇರುವ ತನಕವೂ ಮುಂದುವರಿದಿದ್ದ ಹೋರಾಟಗಳು, ನಂತರ ತಣ್ಣಗಾಗಿದ್ದವು.
ದಕ್ಷಿಣ ಕನ್ನಡದ ಮಂಗಳೂರಿನಲ್ಲಿ 2019 ರ ಡಿಸೆಂಬರ್ 19 ರಂದು ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಮೃತಪಟ್ಟಿದ್ದರು. ನಂತರ ಸಿಎಎ ಹೋರಾಟಗಳು ರಾಜ್ಯಾದ್ಯಂತ ತೀವ್ರ ಕಾವು ಪಡೆದಿದ್ದವು. ಇದೀಗ, ಸಿಎಎ ಜಾರಿಗೆ ಸೋಮವಾರ ರಾತ್ರಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಚುನಾವಣೆ ಸನ್ನಿಹಿತವಾಗಿರುವ ಕಾಲದಲ್ಲಿ ಮತ್ತೆ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆ ಇದೆ.
ಹೋರಾಟ ಮುಂದುವರಿಯಲಿದೆ: ಎಸ್‌ಡಿಪಿಐ
ಸಿಎಎ ವಿರುದ್ಧ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಈ ಬಾರಿಯೂ ಕಾನೂನಾತ್ಮಕ, ರಾಜಕೀಯಾತ್ಮಕ ಹಾಗೂ ಜನರನ್ನು ಸಂಘಟಿಸಿ ಹೋರಾಟ ಮಾಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಬ್ಬುಲ್ ಮಜೀದ್ ಅವರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
“ಸಿಎಎ ಸಂವಿಧಾನ ವಿರೋಧಿ ಕಾನೂನು. ದೇಶದಲ್ಲಿ ಚುನಾವಣಾ ಬಾಂಡ್, ಅಭಿವೃದ್ಧಿ ಮೊದಲಾದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲಿಕ್ಕಾಗಿ ಇದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ. ಇದರ ವಿರುದ್ಧ ಸಂವಿಧಾನ ಬದ್ಧವಾದ ಎಲ್ಲಾ ರೀತಿಯ ಹೋರಾಟ ಮಾಡಲು ಪಕ್ಷ ತಯಾರಿದೆ. ಈ ಕಾನೂನಿಂದ ಯಾವುದೇ ಸಮುದಾಯಕ್ಕೂ ಪ್ರಯೋಜನ ಇಲ್ಲ” ಎಂದು ಮಜೀದ್ ಹೇಳಿದ್ದಾರೆ.
“ಅಸ್ಸಾಮಿನಲ್ಲಿ ಕೋಟ್ಯಾಂತರ ಖರ್ಚು ಮಾಡಿ ಎನ್‌ಆರ್‌ಸಿ ಜಾರಿಗೊಳಿಸಲಾಯಿತು. ಅಲ್ಲಿ ಮುಸ್ಲಿಮರಿಗಿಂತ ಹಿಂದೂಗಳು ಮತ್ತು ಇತರೆ ಸಮುದಾಯದವರೇ ʼಸಂದೇಹಾಸ್ಪದ ಪ್ರಜೆʼಗಳಾದರು. ಅವರಿಗೆ ಸಿಎಎ ಮೂಲಕ ಪೌರತ್ವ ನೀಡಿ ಸಮಾಧಾನಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆದರೆ, ಅಲ್ಲಿ ಕೂಡಾ ತಮ್ಮ ದಾಖಲೆಗಳನ್ನು ನೀಡಲು ವಿಫಲರಾದ ಹಿಂದೂಗಳಿಗೆ ಸಮಸ್ಯೆ ಎದುರಾಗುತ್ತದೆ. ಇನ್ನೊಂದೆಡೆ, ನಮ್ಮ ನೆರೆ ಹೊರೆಯ ದೇಶಗಳಲ್ಲಿ ಶ್ರೀಲಂಕಾ ಅತೀ ಹೆಚ್ಚು ಜನಾಂಗೀಯ ಕಲಹಗಳಿಗೆ ಸಾಕ್ಷಿಯಾಗಿದೆ. ಅಲ್ಲಿನ ತಮಿಳರನ್ನು ಇದರಿಂದ ಹೊರಗಿಡಲಾಗಿದೆ. ತಮಿಳರಲ್ಲಿ ಹಿಂದೂಗಳು, ಕ್ರೈಸ್ತರು, ಮುಸ್ಲಿಮರು ಇದ್ದಾರೆ. ಹಾಗಾಗಿ ಇದು ಯಾವ ಸಮುದಾಯಕ್ಕೂ ಪ್ರಯೋಜನಕ್ಕೆ ಬಾರದ ಒಂದು ಕಾನೂನು. ಮತಗಳ ಧ್ರುವೀಕರಣಕ್ಕಾಗಿ ಇದನ್ನು ತರಲಾಗಿದೆ” ಎಂದು ಅವರು ಹೇಳಿದ್ದಾರೆ.
ಹೋರಾಟದ ಹಾದಿ ಭಿನ್ನವಾಗಿರುತ್ತದೆ: ಬಿ ಆರ್ ಭಾಸ್ಕರ್ ಪ್ರಸಾದ್
ಈ ಬಾರಿಯ ಹೋರಾಟ ಹಿಂದಿನ ರೀತಿಯಲ್ಲಿ ಇರುವುದಿಲ್ಲ, ಬೇರೆಯದ್ದೇ ರೀತಿ ನಾವು ಹೋರಾಟ ಮಾಡುತ್ತೇವೆ, ಆದರೆ ಹೋರಾಟವಂತೂ ಮಾಡುತ್ತೇವೆ ಎಂದು ಎಸ್‌ಡಿಪಿಐ ನಾಯಕ ಮತ್ತು ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್ ನೆಲಮಂಗಲ ಅವರು ʼದಿ ಫೆಡೆರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
“ಈ ಹಿಂದೆ ಸಿಎಎ ಹೋರಾಟಗಳ ಮೂಲಕ ಜನರಿಗೆ ಜಾಗೃತಿಯನ್ನು ಮೂಡಿಸುವ ಉದ್ದೇಶವೂ ಹೊಂದಿತ್ತು. ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಹಾಗಾಗಿ, ಸಿಎಎ ಸಂವಿಧಾನ ವಿರೋಧಿ ಕಾನೂನು ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ, ಇನ್ನೂ ಇದು ತಪ್ಪು-ಸರಿ ಎಂಬ ಬಗ್ಗೆ ಚರ್ಚೆ ಮಾಡುವುದೇನೂ ಉಳಿದಿಲ್ಲ. ಆದರೆ, ಸಿಎಎ ಜಾರಿ ಮೂಲಕ ಎಲೆಕ್ಟಾರಲ್ ಬಾಂಡ್, ದೇಶ ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಸೇರಿದಂತೆ ಹಲವಾರು ನೈಜ ಸಮಸ್ಯೆಗಳನ್ನು ಮರೆ ಮಾಚಲು ಕೇಂದ್ರ ಹೊರಟಿದೆ. ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಜನರ ಮುಂದೆ ಇಡಲು ಈ ಬಾರಿಯ ಪ್ರತಿಭಟನೆಗಳಲ್ಲಿ ಹೆಚ್ಚಿನ ಒತ್ತು ನೀಡುತ್ತೇವೆ. ಈ ಹಿಂದಿನ ಹೋರಾಟಕ್ಕಿಂತ ಈ ಬಾರಿಯ ಹೋರಾಟ ಹೆಚ್ಚಿನ ಫಲಿತಾಂಶ ತರಲಿದೆ” ಎಂದು ಅವರು ಹೇಳಿದ್ದಾರೆ.