
ಕೈಗಾ ಅಣುಸ್ಥಾವರದಲ್ಲಿ ದುರಂತ: ಗೇಟ್ ಬಿದ್ದು ಸಿಐಎಸ್‌ಎಫ್ ಸಿಬ್ಬಂದಿ ಸಾವು
ಗಂಭೀರ ಗಾಯಗಳಿಂದಾಗಿ ಅತಿಯಾದ ರಕ್ತಸ್ರಾವವಾದ ಕಾರಣ, ಅವರನ್ನು ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಅಣು ಸ್ಥಾವರದ ಮೂಲಗಳು ಮತ್ತು ಮಲ್ಲಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ ಆವರಣದಲ್ಲಿ ಕರ್ತವ್ಯ ನಿರತರಾಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್ ಒಬ್ಬರು, ಅತಿ ಭಾರದ ಗೇಟ್ ಮೈಮೇಲೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಮಹಿಮಾನಗಡ್ ಮೂಲದ ಶೇಖರ್ ಭೀಮರಾವ್ ಜಗದಾಲೆ (48) ಮೃತಪಟ್ಟ ದುರ್ದೈವಿ. ಶನಿವಾರ ರಾತ್ರಿ ಪಾಳಿಯಲ್ಲಿ ಅಣು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಕಾವಲು ಕಾಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಏಕಾಏಕಿ ಗೇಟ್ ಕುಸಿದು ಅವರ ತಲೆಯ ಮೇಲೆ ಬಿದ್ದಿದೆ.
ಗೇಟ್ ಬಿದ್ದ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ, ಶೇಖರ್ ಅವರು ಸ್ಥಳದಲ್ಲೇ ಕಿರುಚಿಕೊಂಡಿದ್ದಾರೆ. ಅವರ ಕಿರುಚಾಟ ಕೇಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಸ್‌ಟಿಎಫ್ ಸಿಬ್ಬಂದಿ, ಅವರನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಿದರು. ಆದರೆ, ಗಂಭೀರ ಗಾಯಗಳಿಂದಾಗಿ ಅತಿಯಾದ ರಕ್ತಸ್ರಾವವಾದ ಕಾರಣ, ಅವರನ್ನು ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಅಣು ಸ್ಥಾವರದ ಮೂಲಗಳು ಮತ್ತು ಮಲ್ಲಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

