ಚಿತ್ತಾಪುರ ಪಥಸಂಚಲನ: ಸಂಧಾನ ಸಭೆ: ಆರ್‌ಎಸ್‌ಎಸ್‌-ಭೀಮ್ ಆರ್ಮಿ ಸೇರಿ 10 ಸಂಘಟನೆಗಳಿಗೆ ಕರೆ
x

ಚಿತ್ತಾಪುರ ಪಥಸಂಚಲನ: ಸಂಧಾನ ಸಭೆ: ಆರ್‌ಎಸ್‌ಎಸ್‌-ಭೀಮ್ ಆರ್ಮಿ ಸೇರಿ 10 ಸಂಘಟನೆಗಳಿಗೆ ಕರೆ

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅಂತಿಮ ತೀರ್ಮಾನಕ್ಕೂ ಮುನ್ನ ಶಾಂತಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.


Click the Play button to hear this message in audio format

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ವಿಚಾರವು ಇದೀಗ ಪ್ರತಿಷ್ಠೆಯ ಕಣವಾಗಿದ್ದು, ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯದ ನಿರ್ದೇಶನದಂತೆ, ಕಲಬುರಗಿ ಜಿಲ್ಲಾಡಳಿತವು ಅಕ್ಟೋಬರ್ 28 ರಂದು ಶಾಂತಿ ಸಭೆಯನ್ನು ಕರೆದಿದ್ದು, ಆರ್‌ಎಸ್‌ಎಸ್‌ ಮತ್ತು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಭೀಮ್ ಆರ್ಮಿ ಸೇರಿದಂತೆ ಒಟ್ಟು 10 ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಶಾಂತಿ ಸಭೆ

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಅಂತಿಮ ತೀರ್ಮಾನಕ್ಕೂ ಮುನ್ನ ಶಾಂತಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಅಕ್ಟೋಬರ್ 28 ರಂದು ಬೆಳಗ್ಗೆ 11.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿದೆ. ಸಭೆಗೆ ಹಾಜರಾಗುವ ಪ್ರತಿ ಸಂಘಟನೆಯ ಮೂವರು ಸದಸ್ಯರು ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಪ್ರತಿಷ್ಠೆಯ ಕಣವಾದ ಪಥಸಂಚಲನ

ರಾಜ್ಯದ ಬೇರೆಡೆಗಳಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಗಳು ನಡೆದಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ಇದು ಕಗ್ಗಂಟಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಮುಂದಾದ ಬೆನ್ನಲ್ಲೇ, ಭೀಮ್ ಆರ್ಮಿ ಸೇರಿದಂತೆ ಸುಮಾರು 11 ಸಂಘಟನೆಗಳು ಅದೇ ದಿನದಂದು ತಾವೂ ಮೆರವಣಿಗೆ ನಡೆಸಲು ಅನುಮತಿ ಕೋರಿವೆ. ಇದು ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಇದೀಗ ಪ್ರಕರಣ ನ್ಯಾಯಾಲಯದಲ್ಲಿದ್ದು, ಶಾಂತಿ ಸಭೆಯ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

ಮುಂದುವರಿದ ವಾಕ್ಸಮರ

"ಯಾವುದೇ ಕಾರಣಕ್ಕೂ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಿಯೇ ತೀರುತ್ತೇವೆ," ಎಂದು ಆರ್‌ಎಸ್‌ಎಸ್‌ ಮುಖಂಡರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, "ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆರ್‌ಎಸ್‌ಎಸ್‌ ಏನು ದೇವರಿಗಿಂತ ದೊಡ್ಡದೇ? ಅವರಿಗೆ ದೇಣಿಗೆ ಎಲ್ಲಿಂದ ಬರುತ್ತದೆ?" ಎಂದು ಪ್ರಶ್ನಿಸಿದ್ದಾರೆ. "ಅನುಮತಿ ಕೋರಿ 11 ಸಂಘಟನೆಗಳು ಅರ್ಜಿ ಹಾಕಿವೆ, ಅಂತಿಮವಾಗಿ ನ್ಯಾಯಾಲಯವೇ ತೀರ್ಮಾನಿಸಲಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More
Next Story