Illegal Immigrants: ಚಿತ್ರದುರ್ಗದಲ್ಲಿ ಆರು ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ದಾಖಲೆಗಳ ವಶ
ಚಿತ್ರದುರ್ಗದ ಬಳಿ ಅಕ್ರಮವಾಗಿ ತಂಗಿದ್ದ ಆರೋಪದ ಮೇಲೆ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹೊಳಲ್ಕೆರೆ ರಸ್ತೆಯ ಗಾರ್ಮೆಂಟ್ಸ್ ಒಂದರ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಿದಾಗ, ಅವರು ಬಾಂಗ್ಲಾದೇಶಿ ಪ್ರಜೆಗಳಾಗಿದ್ದು, ಹಲವಾರು ವರ್ಷಗಳ ಹಿಂದೆ ಇಲ್ಲಿ ನೆಲೆಸುವ ಉದ್ದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ.
ಆರೋಪಿತ ಬಾಂಗ್ಲಾ ದೇಶೀಯರು ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸಿದ ಬಳಿಕ ಕೋಲ್ಕತ್ತಾದಲ್ಲಿ ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದರು ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಜೀವನೋಪಾಯಕ್ಕಾಗಿ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವ್ಯಕ್ತಿಗಳು ಕೆಲ ಸಮಯದಿಂದ ಚಿತ್ರದುರ್ಗ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಅವರ ವಿರುದ್ಧ ಕಾನೂನು ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳು, ಕಾರ್ಮಿಕ ಕಾರ್ಡ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಪ್ಯಾನ್ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.