
ದೂರು ಕೊಡುವುದಕ್ಕೂ ಮೊದಲೇ ತಿಮರೋಡಿಯನ್ನು ಚಿನ್ನಯ್ಯ ಭೇಟಿಯಾಗಿದ್ದ ವಿಡಿಯೊ ವೈರಲ್; ಏನೇನು ಹೇಳಿದ್ದಾನೆ ಕೇಳಿ...
ಚಿನ್ನಯ್ಯ ತನ್ನ ಪತ್ನಿಯೊಂದಿಗೆ, ಪ್ರಕರಣದ ಪ್ರಮುಖ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ದಾಖಲಾಗಿದೆ.
ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣಗಳನ್ನು ಹೂಳಲಾಗಿದೆ ಎಂಬ ಆರೋಪದಡಿ ಸುದ್ದಿಯಲ್ಲಿರುವ 'ಮಾಸ್ಕ್ ಮ್ಯಾನ್' ಚಿನ್ನಯ್ಯ, ಎರಡು ವರ್ಷಗಳ ಹಿಂದೆ ಪ್ರಜಾಪ್ರಭುತ್ವ ವೇದಿಕೆಯ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಭೇಟಿಯಾಗಿದ್ದ ವಿಡಿಯೋ ಇದೀಗ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಚಿನ್ನಯ್ಯ, ತಾನು ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ.
ಇತ್ತೀಚೆಗೆ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂಥದ್ದೊಂದು ವಿಡಿಯೊ ತಮ್ಮಲ್ಲಿ ಇದೆ ಎಂದು ಹೇಳಿಕೊಂಡಿದ್ದರು.
ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಚಿನ್ನಯ್ಯ ತನ್ನ ಪತ್ನಿಯೊಂದಿಗೆ, ಪ್ರಕರಣದ ಪ್ರಮುಖ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ದಾಖಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ರೆಕಾರ್ಡ್ ಆಗಿದೆ ಎನ್ನಲಾದ ಈ ವಿಡಿಯೋದಲ್ಲಿ, ಚಿನ್ನಯ್ಯ ತಾನು ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಗಳನ್ನು ತಿಮರೋಡಿ ಅವರಿಗೆ ವಿವರಿಸಿದ್ದಾನೆ. .
"ನಾನು ಗುಂಡಿ ತೆಗೆದು ಹೆಣಗಳನ್ನು ಹೂಳುತ್ತಿದ್ದೆ" ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, "ನೇತ್ರಾವತಿ ಸ್ನಾನಘಟ್ಟ ಸರ್ಕಾರಿ ಜಾಗ ಎಂದು ಹೇಳಿದವರಿಗೆ, ನನ್ನ ಕೈಯಲ್ಲೇ ರಕ್ತ ಬರುವ ಹಾಗೆ ಹೊಡೆಸುತ್ತಿದ್ದರು" ಎಂದು ಆತ ಆರೋಪಿಸಿದ್ದಾನೆ. "ಒಂದು ಹೆಣವನ್ನು ಹೂಳುವಾಗ, ಡಾಕ್ಟರ್ ಬಾರದೆ, ಕಾಂಪೌಂಡರ್ ಒಬ್ಬರೇ ಪೋಸ್ಟ್‌ಮಾರ್ಟಮ್ ಮಾಡಿದ್ದರು" ಎಂಬ ಗಂಭೀರ ಆರೋಪ ಚಿನ್ನಯ್ಯ ಮಾಡಿದ್ದಾನೆ. "ಸೌಜನ್ಯ ಅತ್ಯಾಚಾರ ಮತ್ತು ಕೊಲೆ ವಿಚಾರವನ್ನು ನಾವು ಬೇರೆ ಕಡೆ ಮಾತನಾಡುತ್ತೇವೆ ಎಂದು ಹೇಳಿ, ನಮ್ಮನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದರು" ಎಂದೂ ಆತ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ತನಗೆ ಧರ್ಮಸ್ಥಳದವರು 3.5 ಲಕ್ಷ ರೂಪಾಯಿ ಕೊಡಬೇಕಿತ್ತು, ಆದರೆ ಕೇವಲ ಸ್ವಲ್ಪ ಹಣವನ್ನು ಕೊಟ್ಟು ಜಾಗ ಖಾಲಿ ಮಾಡಿಸಿದರು ಎಂದು ಚಿನ್ನಯ್ಯ ತಿಮರೋಡಿ ಅವರ ಬಳಿ ಅಳಲು ತೋಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಚಿನ್ನಯ್ಯ ತನ್ನ ಪತ್ನಿಯೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾಗ, ಆಕಸ್ಮಿಕವಾಗಿ ವಿಠಲಗೌಡ ಎಂಬುವವರಿಗೆ ಸಿಕ್ಕಿದ್ದ. ನಂತರ, ವಿಠಲಗೌಡ ಅವರೇ ಚಿನ್ನಯ್ಯನನ್ನು ತಿಮರೋಡಿ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.
ಬುರುಡೆ ತಂದು ದೂರು ನೀಡಿದ್ದ ಚಿನ್ನಯ್ಯ
2025ರ ಜುಲೈನಲ್ಲಿ, ಸಿ.ಎನ್. ಚಿನ್ನಯ್ಯ ತಾನು 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದಾಗ, ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ತಾನೇ ಹೂತಿಟ್ಟಿದ್ದೇನೆ ಎಂದು ಆರೋಪಿಸಿ, ಒಂದು ಮಾನವ ಬುರುಡೆಯೊಂದಿಗೆ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ ರಚಿಸಿ, ತನಿಖೆ ನಡೆಸುತ್ತಿದೆ. ಚಿನ್ನಯ್ಯ ನೀಡಿದ ಮಾಹಿತಿಯ ಮೇರೆಗೆ ಉತ್ಖನನ ನಡೆಸಿದರೂ, ಮಹತ್ವದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇದೀಗ ಸಾಕ್ಷ್ಯನಾಶ ಆರೋಪದ ಮೇಲೆ ಚಿನ್ನಯ್ಯನನ್ನು ಬಂಧಿಸಲಾಗಿದ್ದು, ಶಿವಮೊಗ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.