
ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆಯಲ್ಲಿ ಮತ್ತಷ್ಟು ಅಸ್ಥಿಪಂಜರಗಳು ಪತ್ತೆ, ತನಿಖೆಗೆ ಹೊಸ ತಿರುವು?
ಈ ಅನಿರೀಕ್ಷಿತ ಪತ್ತೆಯಿಂದ ತನಿಖಾ ತಂಡವೇ ಆಶ್ಚರ್ಯಚಕಿತಗೊಂಡಿದೆ. ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಅಸ್ಥಿಪಂಜರಗಳು ಇರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇಡೀ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ವಿಚಾರಣೆ ಮಹತ್ವದ ಮಾಹಿತಿಯೊಂದು ಲಭಿಸಿದೆ. ಶನಿವಾರ ನಡೆದ ಮಹಜರು ಸಂದರ್ಭದಲ್ಲಿ ಬಂಗ್ಲೆ ಗುಡ್ಡೆ ಎಂಬ ಸ್ಥಳದಲ್ಲಿ ಮತ್ತಷ್ಟು ಮಾನವ ಅಸ್ಥಿಪಂಜರದ ಭಾಗಗಳು ಪತ್ತೆಯಾಗಿವೆ. ಈ ಬೆಳವಣಿಗೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಸೌಜನ್ಯ ಕುಟುಂಬದ ಸಂಬಂಧಿ ಎನ್ನಲಾದ ವಿಠ್ಠಲ್ ಗೌಡ ಎಂಬುವವರ ಸಮ್ಮುಖದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡೆಯಲ್ಲಿ ಮಹಜರು ನಡೆಸಿದ್ದಾರೆ. ಈ ಹಿಂದೆ, ಪ್ರಕರಣದ ಮುಖ್ಯ ಆರೋಪಿ ಚಿನ್ನಯ್ಯನಿಂದ ಸ್ಥಳದ ಮಾಹಿತಿ ಪಡೆದಿದ್ದ ಗಿರೀಶ್ ಮಟ್ಟಣ್ಣವರ್ ಸೂಚನೆಯಂತೆ, ವಿಠ್ಠಲ್ ಗೌಡ ಇದೇ ಸ್ಥಳದಲ್ಲಿ ಒಂದು ತಲೆಬುರುಡೆಯನ್ನು ಅಗೆದು ಹೊರತೆಗೆದಿದ್ದರು. ಇದನ್ನು ಚಿನ್ನಯ್ಯ ಎಸ್‌ಐಟಿ ಪೊಲೀಸರಿಗೆ ಸಾಕ್ಷ್ಯವಾಗಿ ನೀಡಿದ್ದ.
ಇದೀಗ ಎಸ್‌ಐಟಿ ನಡೆಸಿದ ಮಹಜರಿನ ವೇಳೆ, ಕನಿಷ್ಠ ಇಬ್ಬರು ವ್ಯಕ್ತಿಗಳಿಗೆ ಸೇರಿದ್ದೆಂದು ಶಂಕಿಸಲಾದ ಅಸ್ಥಿಪಂಜರದ ಭಾಗಗಳು ಪತ್ತೆಯಾಗಿವೆ. ಈ ಅನಿರೀಕ್ಷಿತ ಪತ್ತೆಯಿಂದ ತನಿಖಾ ತಂಡವೇ ಆಶ್ಚರ್ಯಚಕಿತಗೊಂಡಿದೆ. ಈ ಸ್ಥಳದಲ್ಲಿ ಇನ್ನೂ ಹೆಚ್ಚಿನ ಅಸ್ಥಿಪಂಜರಗಳು ಇರಬಹುದೆಂದು ಅಧಿಕಾರಿಗಳು ಶಂಕಿಸಿದ್ದು, ಪತ್ತೆಯಾದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ಚಿನ್ನಯ್ಯನ ಬಂಧನ
ಜುಲೈ 19ರಂದು, ತಾನು ಹಲವು ಶವಗಳನ್ನು ಒತ್ತಾಯಪೂರ್ವಕವಾಗಿ ಹೂತಿದ್ದೆ ಎಂದು ಚಿನ್ನಯ್ಯ ಎಂಬಾತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಆರಂಭದಲ್ಲಿ ಸಾಕ್ಷಿದೂರುದಾನಾಗಿದ್ದ ಚಿನ್ನಯ್ಯ, ತಾನು ಗುರುತಿಸಿದ 17ಕ್ಕೂ ಹೆಚ್ಚು ಸ್ಥಳಗಳಲ್ಲಿ ಉತ್ಖನನ ನಡೆಸಿದಾಗ ಹೆಚ್ಚಿನ ಕಡೆಗಳಲ್ಲಿ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿರಲಿಲ್ಲ. ಅಲ್ಲದೆ, ಆತ ತಂದುಕೊಟ್ಟ ತಲೆಬುರುಡಗೆ ಬಗ್ಗೆ ಶಂಕಾಸ್ಪದ ಹೇಳಿಕೆಗಳನ್ನು ನೀಡಿದ್ದ , ಬಳಿಕ ಆಗಸ್ಟ್ 23ರಂದು ಆತನನ್ನೇ ಬಂಧಿಸಲಾಗಿತ್ತು.
ಚಿನ್ನಯ್ಯ ಬಂಧನಕ್ಕೊಳಗಾಗಿದ್ದರೂ, ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ ತನಿಖೆಯನ್ನು ಮುಂದುವರಿಸಿದೆ. ವಿಠ್ಠಲ್ ಗೌಡ ಅವರನ್ನು ಸದ್ಯಕ್ಕೆ ಬಂಧಿಸಿಲ್ಲವಾದರೂ, ಅಗತ್ಯವಿದ್ದರೆ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಬಂಗ್ಲೆ ಗುಡ್ಡೆಯಲ್ಲಿ ಸಿಕ್ಕಿರುವ ಹೊಸ ಸಾಕ್ಷ್ಯವು ಈ ಸಂಕೀರ್ಣ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.