ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 7 ಜನರ ಬಂಧನ, 5 ಮಕ್ಕಳ ರಕ್ಷಣೆ
ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ. ವ್ಯವಸ್ಥಿತವಾಗಿ ಮಕ್ಕಳನ್ನು ಕದ್ದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಏಳು ಜನ ಆರೋಪಿಗಳನ್ನು ಬಂಧಿಸಿ, ಐದು ಮಕ್ಕಳನ್ನು ರಕ್ಷಿಸಿದ್ದಾರೆ.
ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ. ವ್ಯವಸ್ಥಿತವಾಗಿ ಮಕ್ಕಳನ್ನು ಕದ್ದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಏಳು ಜನ ಆರೋಪಿಗಳನ್ನು ಬಂಧಿಸಿ, ಐದು ಮಕ್ಕಳನ್ನು ರಕ್ಷಿಸಿದ್ದಾರೆ.
ತುಮಕೂರಿನ ಮಹೇಶ್( 39) ಮಹಬೂಬ್ ಷರೀಫ್ ( 52) ರಾಮಕೃಷ್ಣ (53) ಹನುಮಂತರಾಜು (45) ಮುಬಾರಕ್ ಪಾಷ (44) ಸ್ಟಾಫ್ ನರ್ಸ್ ಗಳಾದ ಪೂರ್ಣಿಮಾ ( 39) ಸೌಜನ್ಯ (48) ಎಂಬ ಬಂಧಿತ ಆರೋಪಿಗಳು.ಈ ಗ್ಯಾಂಗ್ ತುಮಕೂರು ಜಿಲ್ಲೆಯಲ್ಲಿ 2022 ರಿಂದ ಆಕ್ಟೀವ್ ಆಗಿತ್ತು. ತುಮಕೂರು ಜಿಲ್ಲೆಯಲ್ಲಿ 9 ಮಕ್ಕಳನ್ನು ಮಾರಾಟ ಮಾಡಿದ್ದಾರೆ. 9 ಮಕ್ಕಳ ಪೈಕಿ 5 ಮಕ್ಕಳನ್ನ ರಕ್ಷಣೆ ಮಾಡಲಾಗಿದೆ.
ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು ಹೇಗೆ?
ಜುಲೈ 09 ರಂದು ಮಹದೇವಮ್ಮ, ಮುಬಾರಕ್ ದಂಪತಿಯ 11 ತಿಂಗಳ ಮಗು ಕಿಡ್ನಾಪ್ ಆಗಿತ್ತು. ಗುಬ್ಬಿ ಪಟ್ಟಣ ಚನ್ನಬಸವೇಶ್ವರ ದೇವಸ್ಥಾನದ ಎದುರು ಟೆಂಟ್ ಹಾಕಿಕೊಂಡಿದ್ದ ಈ ದಂಪತಿಗಳು ಹಳ್ಳಿ ಹಳ್ಳಿಗಳ ಮೇಲೆ ತಲೆ ಕೂದಲು, ಹೇರ್ ಪಿನ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಅಲೆಮಾರಿಗಳು, ರಾತ್ರಿ ಟೆಂಟ್ ನಲ್ಲಿ ಮಲಗಿದ್ದ ಈ ದಂಪತಿಗಳ 11 ವರ್ಷದ ರಾಕಿ ಹೆಸರಿನ ಗಂಡು ಮಗು ಬೆಳಗ್ಗೆ ವೇಳೆಗೆ ನಾಪತ್ತೆಯಾಗಿತ್ತು. ಈ ಬಗ್ಗೆ ದಂಪತಿ ಗುಬ್ಬಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡದ ರಾಮಕೃಷ್ಣಪ್ಪ, ಹಾಗೂ ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಾತ್ರೆಯಲ್ಲಿ ಟ್ಯಾಟೂ ಹಾಕುವ ಕೆಲಸ ಮಾಡುವ ಈ ಇಬ್ಬರು ಮಗುವನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಕ್ಕಳ ಮಾರಾಟ ಜಾಲದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಪ್ರಕರಣದ ಕಿಂಗ್ ಪಿನ್ ಗಳಾದ ತುಮಕೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಮಹೇಶ್, ಚಿಕ್ಕನಾಯನಕನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಶಿಸ್ಟ್ ಆಗಿದ್ದ ಮಹಬೂಬ್ ಪರೀಪ್ ಹಾಗೂ ಮಧುಗಿರಿ ತಾಲೂಕಿನ ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ, ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೌಜನ್ಯ, ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುಬಾರಕ್ ಪಾಷ್ ಎಂಬುವರನ್ನ ಬಂಧಿಸಿದ್ದಾರೆ.
ಮಕ್ಕಳ ಕಳ್ಳರ ಜಾಲ ಹೇಗೆ ಕೆಲಸ ಮಾಡುತ್ತಿತ್ತು
ಅವಿವಾಹಿತ ಗರ್ಭಧರಿಸಿದ ಹಾಗೂ ಅಕ್ರಮವಾಗಿ ಗರ್ಭಧರಿಸಿರುವ ಮಹಿಳೆಯರನ್ನ ಪತ್ತೆ ಮಾಡಿ ಅವರಿಂದ ಮಕ್ಕಳನ್ನ ಪಡೆದುಕೊಂಡು ಮಕ್ಕಳಿಲ್ಲದ ದಂಪತಿಗೆ 2ರಿಂದ 3 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳ ಅವಶ್ಯಕತೆ ಇರುವ ಮಹಿಳೆಯರನ್ನ ಗರ್ಭವತಿಯಾಗಿದ್ದಾರೆಂದು ಹುಳಿಯಾರಿನ ಖಾಸಗಿ ನರ್ಸಿಂಗ್ ಹೋಂ ನಲ್ಲಿ ದಾಖಲಿಸಿ ಜನನ ದಾಖಲೆ ಸೃಷ್ಟಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ರಕ್ಷಣೆಯಾದ ಮಕ್ಕಳ ವಿವರ
ಮಾರಾಟವಾದ 9 ಮಕ್ಕಳ ಪೈಕಿ 5 ಮಕ್ಕಳನ್ನ ಪೊಲೀಸರು ರಕ್ಷಿಸಿದ್ದಾರೆ. ಇದರಲ್ಲಿ 1 ಮಗು ಸಾವು, ಇನ್ನುಳಿದ 3 ಮಕ್ಕಳಿಗಾಗಿ ಶೋಧಕಾರ್ಯ ಮುಂದುವರೆದಿದೆ. ಗುಬ್ಬಿಯಲ್ಲಿ ನಾಪತ್ತೆಯಾಗಿದ್ದ 11 ತಿಂಗಳ ರಾಕಿ ಎಂಬ ಗಂಡು ಮಗು ಬೆಳ್ಳುರು ಕ್ರಾಸ್ ಮೂಲದ ದಂಪತಿಗೆ ಮಾರಾಟ ಮಾಡಲಾಗಿತ್ತು. ಉಳಿದಂತೆ ಹುಳಿಯಾರಿಗೆ ಮಾರಾಟವಾಗಿದ್ದ 1.6 ವರ್ಷದ ಹೆಣ್ಣು ಮಗು ಟಿ.ವಿ ಭಕ್ತಿ, ಹಾಸನದ ಸಾಣೇಹಳ್ಳಿಗೆ ಮಾರಾಟವಾಗಿದ್ದ 1.3 ತಿಂಗಳ ಹೆಣ್ಣು ಮಗು ಕೃತಿ, ಬೆಂಗಳೂರಿನ ಸಿಂಗಾಪುರ ಲೇಔಟ್ ದಂಪತಿಗೆ ಮಾರಾಟವಾಗಿದ್ದ 2.6 ವರ್ಷದ ಗಂಡು ಮಗು ವರ್ಷಿತ್ ಕಿಶನ್ ಆಚಾರ್ಯ. ಮಧುಗಿರಿ ತಾಲ್ಲೂಕಿನ ಎಸ್. ಎಂ. ಗೊಲ್ಲಹಳ್ಳಿಗೆ ಮಾರಾಟವಾಗಿದ್ದ 1.3 ವರ್ಷದ ಹೆಣ್ಣು ಮಗು ಮೈಥಿಲಿಯನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ ರಾಕಿ ಮಗುವನ್ನು ಪೋಷಕರಿಗೆ ವಾಪಸ್ ಕೊಡಲಾಗಿದ್ದು, ಉಳಿದ ನಾಲ್ವರು ಮಕ್ಕಳ ಪೋಷಕರ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಮಧ್ಯೆ ಉಳಿದ 3 ಮಕ್ಕಳನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮುಂದುವರೆಸಿದ್ದಾರೆ. ಅಲ್ಲದೆ ಮಕ್ಕಳನ್ನು ಖರೀದಿಸಿದವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ