
ಬಾಲ್ಯವಿವಾಹ | ಕರ್ನಾಟಕ 2ನೇ ಸ್ಥಾನ, ತಲೆತಗ್ಗಿಸುವ ವಿಚಾರ: ಸಚಿವೆ ಹೆಬ್ಬಾಳ್ಕರ್
ಬಾಲ್ಯವಿವಾಹ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ದುರದೃಷ್ಟಕರ ಸಂಗತಿ. ಜವಾಬ್ದಾರಿಯುತ ಸ್ಥಾನವಾದ ಮಹಿಳಾ ಮಂತ್ರಿಯಾಗಿ ನನಗೆ ಇದೊಂದು ತಲೆ ತಗ್ಗಿಸುವ ವಿಚಾರ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ(ಜು.13) ಮಂಗಳೂರಿನಲ್ಲಿ ಮಾತನಾಡಿದ ಅವರು, ʻʻಈ ಕುರಿತು ನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮಗಳು ಆಗಿದೆ. ಇದಕ್ಕೆ ನಮ್ಮ ಒಂದು ಇಲಾಖೆಯ ಲೋಪದೋಷ ಮಾತ್ರ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತಿ, ಪ್ರೈಮರಿ ಶಾಲೆಯ ಎಸ್.ಡಿ.ಎಂ.ಸಿ, ಕಾನೂನು, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಕೂಡ ಬೇಕಾಗುತ್ತದೆ. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಈ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಿದೆʼʼ ಎಂದರು.
ʻʻರಾಜ್ಯದ ಮಟ್ಟಿಗೆ ನೋಡಿದರೆ ಬಳ್ಳಾರಿ ಪ್ರಥಮ ಸ್ಥಾನದಲ್ಲಿದೆ, ಬೆಳಗಾವಿ ಎರಡನೇ ಜಿಲ್ಲೆಯಾಗಿದೆ. ಬೆಳಗಾವಿ ಎರಡನೇ ಜಿಲ್ಲೆಯಾಗಿದೆ ಎಂದು ಹೇಳಲು ನನಗೆ ಬಹಳಷ್ಟು ನಾಚಿಕೆ ಆಗುತ್ತದೆ. ಅದು ಮೂಢನಂಬಿಕೆಯಿಂದ ಮಾಡುತ್ತಾರೋ ಅಥವಾ ಏನಾದರೂ ಕಾರಣ ಇದೆಯಾ ಎಂಬುದೇ ಗೊತ್ತಾಗುತ್ತಿಲ್ಲʼʼ ಎಂದರು.
ʻʻಈ ಕುರಿತು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಮಿಟಿ ಇವೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಹೀಗಾಗಿ ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ನಮಗೆ ವಿಚಾರ ಗೊತ್ತಾದ ತಕ್ಷಣ ಎಫ್.ಐ.ಆರ್ ಮಾಡುತ್ತೇವೆ. ಆದರೂ ಸಹ ಬಾಲ್ಯ ವಿಹಾಹ ಆಗುತ್ತಿದೆ. ಜೊತೆಗೆ ಬಾಲ್ಯದಲ್ಲೇ ಗರ್ಭಿಣಿಯರು ಆಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಬೇರು ಮಟ್ಟದಿಂದ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೂ ಈಗಾಗಲೇ ನಿರ್ದೇಶನ ನೀಡಿದ್ದೇನೆʼʼ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.